ಮಂಗಳವಾರ, ನವೆಂಬರ್ 15, 2011

ಒಂದು ಪ್ರತಿಕ್ರಿಯೆ

ನಿಮ್ಮ ಅಂಕಣ ಬರಹವನ್ನು ಓದಿದೆ. ಮೊದಲ ಓದಿಗೆ ಅಲ್ಲಿನ ವಿವರಗಳು ನಿಮ್ಮ ಮಾತಿಗೆ ಒಪ್ಪಿಗೆ ನೀಡಲು ಒತ್ತಾಯಿಸುತ್ತವೆ. ಈಚೆಗೆ ಕನ್ನಡದಲ್ಲಿ ನಡೆಯುತ್ತಿರುವ ಚರ್ಚೆಯ ಜತೆ ಹೆಜ್ಜೆ ಹಾಕುವ ನಿಮ್ಮ ಈ ಬರಹವನ್ನು ಓದಿದ ಮೇಲೆ ಅನಿಸಿದ ಕೆಲವು ಮಾತುಗಳನ್ನು ಇಲ್ಲಿ ಬರೆದಿದ್ದೇನೆ.

ಕನ್ನಡವೆಂಬುದು ಕನ್ನಡತನ ಎಂಬುದು ತಿರುಳೆಂದು ಏಕೆ ತಿಳಿಯಬೇಕು? ಅದು ಬಗೆ, ಇಲ್ಲವೇ ಬಗೆಯುವ ಪರಿ. ಹಾಗಾಗಿ ನೀರುಳ್ಳಿಯನ್ನು ಸುಲಿಯುತ್ತ ಹೋದಂತೆ ಏನೂ ಉಳಿಯುವುದಿಲ್ಲ ಎಂಬುದು ಹೇಗೋ ಹಾಗೇ ಕನ್ನಡ ಬದುಕಿನಲ್ಲಿ ’ಅನ್ಯ’ವಾದುದನ್ನು ಹೊರಗಿಡುತ್ತ ಹೋದಂತೆ ಏನೂ ಉಳಿಯುವುದಿಲ್ಲ ಎನ್ನುವ ನಿಮ್ಮ ಅನಿಸಿಕೆ ಕನ್ನಡವೆಂಬ ತಿರುಳನ್ನು ಹುಡುಕುವವರಿಗೆ ದಿಟವೆಂದು ತೋರಬಹುದು. ಆದರೆ ನೀರುಳ್ಳಿ ಸುಲಿಯುವಾಗ ಬರುವ ಕಂಪು ಮತ್ತು ಕಣ್ಣೀರು ದಿಟವಲ್ಲವೇ?ಅದೆ ಅದರ ಬಗೆಯಲ್ಲವೇ?

ಒಂದು ವೇಳೆ ಕನ್ನಡ ಬದುಕು ಹೊರಗಿನಿಂದ( ಹಾಗೆಂದು ತಿಳಿಯೋಣ) ಬಂದುದರಿಂದಲೇ ಕಟ್ಟಿದ್ದು ಎಂದು ತಿಳಿಯುವುದಾದರೆ ನನಗೆ ಅಂತಹ ಕನ್ನಡ ಬದುಕು ಕಾನೂರು ಹೆಗ್ಗಡತಿಯ ವಾಸುವಿನ ಚೀಲದಂತೆ ತೋರುತ್ತದೆ. ಅಲ್ಲಿ ಹತ್ತಾರು ಕೂಡಿ ಹಾಕಿದ ಸರಕುಗಳಿವೆ. ಗೋಲಿ,ಗಜ್ಜುಗ,ಹಣ್ಣು,ಹಕ್ಕಿ ಗರಿ,ಬಳಪ,ಪೆನ್ಸಿಲ್,ಚಾಟರ್ ಬಿಲ್ಲು ಹೀಗೆ ಒಂದರೊಡನೊಂದು ಸೇರದ,ಬೆರೆಯದ ಸರಕುಗಳು ಅವು.ಮಾಸಿವೆ,ಹಳತಾಗಿವೆ. ಕನ್ನಡ ಬದುಕು ಹೀಗೆ ಇದೆಯೆಂದು ತಿಳಿಯೋಣವೇ? ಪಡೆದದ್ದನ್ನು ತನ್ನದನ್ನಾಗಿ ಮಾಡಿಕೊಳ್ಳುವ ಬಗೆಯೊಂದು ಇದೆಯಲ್ಲವೇ? ಹಾಗಿಲ್ಲದೇ ಇದ್ದಲ್ಲಿ ’ಅನ್ಯ’ವನ್ನು ಪಡೆದ ಎಲ್ಲ ಬದುಕುಗಳು ಈ ನಾಡಿನಲ್ಲಿ ಒಂದೇ ಬಗೆಯಲ್ಲಿ ಇರಬೇಕಿತ್ತು. ಅಲ್ಲದೆ ಪಡೆದು ಕೊಂಡದ್ದ ಇಡಿಯಾಗಿ ಕನ್ನಡ ಬದುಕಿನೊಳಗೆ ಇಳಿದಿದೆಯೇ? ಹಾಗಿಲ್ಲದಿದ್ದಲ್ಲಿ ಬಂದದ್ದು ಹರಡುವ ಬಗೆಯನ್ನು ಯಾರು ,ಹೇಗೆ ಕಟ್ಟಿಹಾಕಿದರು? ಇದೆಲ್ಲವನ್ನೂ ನೋಡಬೇಕಲ್ಲವೇ?

ದೇಡಿ ಎಂಬುದು ಕೆಲವೊಮ್ಮೆ ತಿರುಳು ಎಂಬ ನೆಲೆಯಲ್ಲಿ ಬಳಕೆಯಾಗುತ್ತದೆ. ಅದನ್ನು ನಾವು ಯಾವಾಗಲೂ ’ಅಲ್ಲದ್ದು’ ಎಂಬ ನೆಲೆಯಲ್ಲೇ ಕಟ್ಟಿಕೊಂಡಿದ್ದೇವೆ. ಮಾರ್ಗವಲ್ಲದ್ದು ದೇಸಿ ಎನ್ನುತ್ತೇವೆ. ಮಾರ್ಗದ ಚೌಕಟ್ಟಿಗೆ ಸಿಗದುದು ದೇಸಿ ಎನಿಸಿ ಬಿಡುತ್ತದೆ. ಆದರೆ ದೇಸಿ ಎನ್ನುವುದನ್ನು ನಾವು ಇನ್ನೂ ಬಗೆವ ಪರಿ ಎಂಬಂತೆ ನೋಡೇ ಇಲ್ಲ. ದೇಸಿ ಎಂಬ ತಿರುಳನ್ನು ಹುಡುಕಲು ಹೊರಟರೆ ಕೊನೆಗೆ ಏನೂ ದೊರೆಯದೇ ಹೋಗಬಹುದು. ಆದರೆ ಕನ್ನಡದ ನೆಲೆಯನ್ನು,ಕನ್ನಡ ಬದುಕಿನ ಬಗೆವ ಪರಿಯನ್ನು ಹುಡುಕದೇ ಬೇರೆ ದಾರಿಯೇ ಇಲ್ಲ.ತಿಳಿ ಕದಡುವುದೆಂದು ಕೊಳವನ್ನು ಕಲಕದೇ ಇರುವುದು ಹೇಗೆ? ಕೊಳವನ್ನು ಕಲಕದೇ ಹಕ್ಕಿಗಳಿಗೆ ಬೇರೆ ದಾರಿಯೇ ಇಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ