ಸೋಮವಾರ, ಮಾರ್ಚ್ 28, 2011

ಕನ್ನಡ ಭಾಷಾಧ್ಯಯನ ಈವರೆಗೆ ಮತ್ತು ಮುಂದೆ


ಕನ್ನಡ ಭಾಷೆಯ ರಚನೆಯನ್ನು ಅರಿಯುವ ಕೆಲಸ ಮೊದಲಾಗಿ ಸಾವಿರದಿನ್ನೂರು ವರುಶಗಳೇ ಸಂದಿವೆ. ಈ ನುಡಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ ಮತ್ತೆ ಮತ್ತೆ ನುಡಿಯ ಕಟ್ಟೋನವನ್ನು ತಿಳಿಯುವ ಕೆಲಸವನ್ನು ಮಾಡುತ್ತಲೇ ಬರಲಾಗಿದೆ. ಸುಮಾರು ಅರವತ್ತು ವರುಶಗಳ ಹಿಂದೆ ಅರಿಮೆಯ ವಲಯಕ್ಕೆ ಭಾಷಾಶಾಸ್ತ್ರ ಬರತೊಡಗಿತು. ಇಲ್ಲಿನ ಕೆಲವು ನುಡಿಯರಿಗರು ಅಮೆರಿಕಾ ಇಂಗ್ಲೆಂಡ್ ಮುಂತಾದ ದೇಶಗಳಿಗೆ ಹೋಗಿ ಅಲ್ಲಿ ತಾವು ಕಲಿತ ಹೊಸ ತಿಳುವಳಿಕೆಯನ್ನು ಕನ್ನಡದಲ್ಲಿ ಹೇಳತೊಡಗಿದರು. ವಿಶ್ವವಿದ್ಯಾಲಯಗಳಲ್ಲಿ ಕಲಿಸುತ್ತಿದ್ದ ಹಲವರು ಭಾಷಾಶಾಸ್ತ್ರದ ಬೇಸಿಗೆ ಶಿಬಿರಗಳಿಗೆ ಹೋಗಿ ಹೊಸ ತಿಳುವಳಿಕೆಯನ್ನು ಪಡೆಯ ತೊಡಗಿದರು. ಇದರಿಂದೇನಾಯಿತು? ಕನ್ನಡ ನುಡಿಯ ರಚನೆಯನ್ನು ಅರಿಯಲು ಈ ಹೊಸ ತಿಳುವಳಿಕೆಯ ನೆರವನ್ನು ಪಡೆಯಬೇಕು ಎಂಬುವವರೊಂದು ಕಡೆಯಾದರೆ ಅಂತಹ ತಿಳಿವಿನ ನೆರವಿಲ್ಲದೆಯೂ ನಮ್ಮ ನುಡಿಯ ರಚನೆಯನ್ನು ಅರಿಯುವುದೇ ಸರಿ ಎಂದು ನಂಬಿದವರು ಇನ್ನೊಂದು ಕಡೆ ನಿಂತರು. ಈ ಎರಡೂ ಗುಂಪುಗಳ ನಡುವೆ ಈ ಐವತ್ತು ವರುಶಗಳಲ್ಲಿ ಹಲವಾರು ಮುಕಾಬಿಲೆಗಳಾಗಿವೆ.ಯಾರು ಗೆದ್ದರು ಎನ್ನುವದಕ್ಕಿಂತ ಇದರಿಂದ ಭಾಷಾಧ್ಯಯನ ಎಂಬುದು ಕನ್ನಡದಲ್ಲಿ ಹೊಸ ಹಾದಿಯಲ್ಲಿ ಸಾಗುವುದಕ್ಕೆ ಇದರಿಂದ ಅಡ್ಡಿಗಳಾದವು ಎನ್ನುವುದು ನೋವಿನ ಸಂಗತಿಯಾಗಿದೆ. ತಮಿಳು,ತೆಲುಗು ಮತ್ತು ಮಲೆಯಾಳಂ ನುಡಿಗಳಲ್ಲಿ ಕೂಡ ಇಂತಹ ಜಗಳಗಳು ನಡೆದಿವೆಯಾದರೂ ಅಲ್ಲೆಲ್ಲಾ ಹೊಸ ದಿಕ್ಕಿನಲ್ಲಿ ಸಾಗಿರುವುದನ್ನು ನೀಡುತ್ತಿದ್ದೇವೆ. ಆದರೆ ಕನ್ನಡದಲ್ಲಿ ಹಾಗಾಗಲಿಲ್ಲ.
ಅಂದರೆ ಕನ್ನಡ ನುಡಿಯ ಓದು ಭಾಷಾ ಶಾಸ್ತ್ರ ತೋರಿದ ಹೊಸ ದಾರಿಗಳಲ್ಲಿ ಸಾಗಿಲ್ಲ ಎಂದಲ್ಲ. ಆದರೆ ಆಂತಹ ಹೆಚ್ಚಿನ ಓದುಗಳಲ್ಲಿ ತೊಡಗಿಸಿಕೊಂಡವರು ಕನ್ನಡವನ್ನು ಚೆನ್ನಾಗಿ ಬಲ್ಲ ಈ ನಾಡಿನ ನುಡಿಯರಿಗರು ಮತ್ತು ಬೇರೆ ನಾಡುಗಳಲ್ಲಿದ್ದುಕೊಂಡು ಕನ್ನಡವನ್ನು ಹೊಸ ಬಗೆಯಲ್ಲಿ ಅರಿಯಲು ತೊಡಗಿದವರು ಸೇರಿದ್ದಾರೆ. ಮೊದಲ ಗುಂಪಿನಲ್ಲಿ ಎ.ಕೆ.ರಾಮನುಜನ್,ತಿರುಮಲೇಶ್.ಕೆ.ವಿ. ಅಮೃತವಲ್ಲಿ, ಶ್ರೀಧರ್.ಎಸ್.ಎನ್ ಮುಂತಾದವರು ಇದ್ದರೆ ಎರಡನೆಯ ಗುಂಪಿನಲ್ಲಿ ವಿಲಿಯಂ ಬ್ರೈಟ್,ಜಾನ್ ಗುಂಫರ್ಜ್, ಮಾರ್ಕ್ ಅರನಾಫ್ ಮುಂತಾದವರಿದ್ದಾರೆ. ಇವರೆಲ್ಲರೂ ತಮ್ಮ ಓದುಗಳನ್ನು ಮಂಡಿಸಿರುವುದು ಇಂಗ್ಲಿಶಿನಲ್ಲಿ. ಅವರ ಬರೆಹಗಳು ಕನ್ನಡ ನಾಡಿನ ಎಳೆಯ vಲೆಮಾರಿಗೆ ದೂರವೇ ಇಳಿದಿವೆ. ಅವುಗಳಿಂದ ಪಡೆದುಕೊಂಡದ್ದನ್ನು ತಮ್ಮ ಓದಿಗೆ ಬಳಸಿದ್ದು ಇಲ್ಲವೆನ್ನುವಷ್ಟು ಕಡಿಮೆ. ಇದೆಲ್ಲದರಿಂದ ಏನಾಯಿತು ಎಂಬುದನ್ನು ನೋಡೋಣ.
ಇದರ ಜೊತೆಗೆ ಎಲ್ಲಿ ಭಾಷಾ ಶಾಸ್ತ್ರವನ್ನು ಹೆಚ್ಚಿನ ಓದಿಗಾಗಿ ತೆರೆದಿಡಲಾಯಿತೋ ಅಂತಹ ಕಡೆಗಳಲ್ಲಿ ಏನನ್ನು ಓದ ಬೇಕು ಮತ್ತು ಯಾವ ನುಡಿಯಲ್ಲಿ ಕಲಿಯ ಬೇಕು ಎಂಬ ಮಾತು ಬಂದಾಗ ಮುಂಗಾಣ್ಕೆಯಿಲ್ಲದೆ ನಡೆದುಕೊಂಡಿರುವುದನ್ನು ಕಾಣುತ್ತೇವೆ. ಭಾಷಾ ಶಾಸ್ತ್ರ ವಿಷಯವನ್ನು ಇಂಗ್ಲಿಶಿನಲ್ಲಿ ಕಲಿಸುವ ಹಾದಿಯನ್ನು ಈಗಲೂ ಹಿಡಿಯಲಾಗುತ್ತಿದೆ. ಕಲಿಯುವವರು ತಮ್ಮದೇ ಬಗೆಯಲ್ಲಿ ಕನ್ನಡವನ್ನು ಬಳಸುತ್ತಿದ್ದಾರಾದರೂ ಇಂಗ್ಲಿಶಿನ ನೆರಳು ಈಗಲೂ ಕಾಡುತ್ತಿದೆ. ಜೊತೆಗೆ ಕನ್ನಡ ನುಡಿಯ ಓದನ್ನು ಈ ವಿಷಯವನ್ನು ಕಲಿಸುವ ಕಡೆಗಳಲ್ಲಿ ದೂರವಿರಿಸಲಾಗಿದೆ. ಭಾಷಾ ಶಾಸ್ತ್ರದಲ್ಲಿ ಎಂಎ ಪದವಿ ಪಡೆದ ಈ ನಾಡಿನ ಹುಡುಗರು ಕನ್ನಡ ನುಡಿ ರಚನೆಂiನ್ನು ವಿವರಿಸಲಾರದಾಗಿರುತ್ತಾರೆ. ಭಾಷಾ ಶಾಸ್ತ್ರದ ಹೊಸ ತಿಳಿವುಗಳು ಕನ್ನಡ ಓದಿನ ನೆಲೆಗಳಲ್ಲಿ ಬಳಕೆಯಾಗದಂತೆ ತಡೆಯುವಲ್ಲಿ ಇವೆಲ್ಲವೂ ಕಾರಣಗಳಾಗಿವೆ.
ಸೊಲ್ಲರಿಮೆಗಳು ಒಂದು ನುಡಿಯ ಕಟ್ಟುಗಳನ್ನು ವಿವರಸಬಲ್ಲವು.ದಿಟ. ಹಾಗೆ ಮಡುವಾಗ ಉಆವ ಚೌಕಟ್ಟುಗಳನ್ನು ಆ ನುಡಿಯನ್ನು ಅರಿಯಲು ತೊಡಗಿರುವ ನುಡಿಯರಿಗರು ಬಳಸುತ್ತಾರೆ ಎಂಬುದನ್ನು ನೋಡಬೇಕು. ಕನ್ನಡದ ಮಟ್ಟಿಗಂತೂ ಮೊದಮೊದಲ ನುಡಿಯರಿಗರು,ಅಂದರೆ ಶ್ರೀವಿಜಯನೇ ಮೊದಲಾಗಿ ಮುಂದೆ ಹತ್ತೊಂಬತ್ತನೆಯ ಶತಮಾನದವರೆಗೆ ಸಂಸ್ಕೃತದ ಚೌಕಟ್ಟನ್ನು ಬಳಸಿ ಕನ್ನಡವನ್ನು ನೋಡುವ ಬಗೆ ಒಪ್ಪಿಗೆಯನ್ನು ಪಡೆದಿತ್ತು. ಆ ಬಳಿಕ ಕ್ರೈಸ್ತ ಮಿಶನರಿಗಳು ಲ್ಯಾಟಿನ ನುಡಿಯ ಚೌಕಟ್ಟನ್ನು ಬಳಸಿ ಕನ್ನಡವನ್ನು ವಿವರಿಸ ತೊಡಗಿದರು. ಸಂಸ್ಕೃತ ಮತ್ತು ಲ್ಯಾಟಿನ್ ಆ ಹೊತ್ತಿಗಾಗಲೇ ಅಚ್ಚುಕಟ್ಟಾದ ಸೊಲ್ಲರಿಮೆಯ ಚೌಕಟ್ಟುಗಳನ್ನು ಹೊಂದಿದ್ದವು. ಆ ನುಡಿಗಳು ಜನರ ನುಡಿಗಳಾಗಿ ಉಳಿದಿರಲಿಲ್ಲ. ಆದ್ದರಿಂದ ಆ ನುಡಿಗಳ ಸೊಲ್ಲರಿಮೆಯ ಚೌಕಟ್ಟುಗಳಲ್ಲಿ ಬದಲಾವಣೆಗಳಾಗುವಂತಿರಲಿಲ್ಲ. ಬದಲಾವಣೆ ಇಲ್ಲದಿರುವುದನ್ನೇ ಎಲ್ಲ ನುಡಿಗಳಿಗೂ ಸಲ್ಲುವ ಗುರುತೆಂದು ತಿಳಿದು ನುಡಿಯರಿಗರು ಆ ಚೌಕಟ್ಟುಗಳನ್ನು ಎಲ್ಲ ನುಡಿಗಳನ್ನು ಅರಿಯಲು ಬಳಸ ತೊಡಗಿದರು. ಕನ್ನಡದ ಮಟ್ಟಿಗೂ ಇದೇ ಹಾದಿಯನ್ನು ಹಿಡಿಯಲಾಗಿದೆ.
ಭಾಷಾ ಶಾಸ್ತ್ರದ ತಿಳುವಳಿಕೆಗಳು ಲೋಕದ ನೂರಾರು ನುಡಿಗಳ ಸೊಲ್ಲರಿಮೆಗಳಲ್ಲಿ ಇರುವ ಬಗೆಗಳನ್ನು ಹೊರತಂದು ತೋರಿಸುತ್ತಿದ್ದಾವಾದರೂ ಅವೆಲ್ಲವನ್ನೂ ಅರಿತು ಕನ್ನಡದ ಓದಿಗೆ ಬಳಸುವ ತಾಳ್ಮ್ಮೆಯನ್ನು ಮತ್ತು ಮುಂಗಾಣ್ಕೆಯನ್ನು ನಮ್ಮ ನುಡಿಯರಿಗರು ಪಡೆಯಲೇ ಇಲ್ಲ. ಇದರಿಂದಾಗಿ ಯಾರಾದರೂ ಪೂರದ್ವ ಹಳಗನ್ನಡ ಎನ್ನುತ್ತೇವಲ್ಲ ಅದರ ಚಹರೆಗಳೇನು ಎಂದು ಕೇಳಿದರೆ ಎಂಬತ್ತು ವರುಶಗಳ ಹಿಂದೆ ಏನನ್ನು ಹೇಳುತ್ತಿದ್ದೇವೋ ಅದನ್ನೆ ಮರಳಿ ಮರಳಿ ಗಿಳಿಗಳಂತೆ ಉಲಿಯುತ್ತಿದ್ದೇವೆ. ಅವೇ ನಾಲ್ಕೈದು ಉದಾಹರಣೆಗಳನ್ನು ಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದೇವೆ.
ಕನ್ನಡ ನುಡಿಯನ್ನು ಅರಿಯಲು ತೊಡಗಿರುವ ನಾಡಿನ ಮತ್ತು ಹೊಡನಾಡಿನ ನುಡಿಯರಿಗರು ಎರಡು ಮಾದರಿಗಳನ್ನು ಹೊಂದಿದ್ದಾರೆ. ಒಂದು ಮಾದರಿಯವರು ಭಾಷೆಯ ಸಾಮಾನ್ಯ ಗುರುತುಗಳೊಂದಿಗೆ ಕನ್ನಡ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ತೋರಿಸಲು ಮುಂದಾಗಿರುವವರು. ಅಂದರೆ ತಾವು ಒಪ್ಪಿರುವ ಮತ್ತು ಬಳಸುತ್ತಿರುವ ಭಾಷಾಶಾಸ್ತ್ರದ ಚೌಕಟ್ಟಿಗೆ ಕನ್ನಡ ಹೊಂದಿಕೊಳ್ಳುವ ಬಗೆಯನ್ನು ತೋರಿಸುತ್ತಿರುತ್ತಾರೆ. ಇಂತಹವರು ಹೆಚ್ಚಾಗಿದ್ದಾರೆ. ಹಾಗೆ ನೋಡಿದರೆ ವಿಶ್ವವಿದ್ಯಾಲಯಗಳಲ್ಲಿ ಈವರೆಗೆ ಕನ್ನಡ ನುಡಿಯನ್ನು ಅವಲಂಬಿಸಿ ನಡೆದಿರುವ ನೂರಾರು ಪಿಎಚ್.ಡಿ ನಿಬಂಧಗಳು ಇದೇ ಮಾದರಿಯಲ್ಲಿವೆ. ಎರಡನೆಯ ಗುಂಪಿನವರ ಮಾದರಿ ಬೇರೆ. ಅವರು ಈಗ ಒಪ್ಪಿತವಾಗಿರುವ ಭಾಷಾ ಶಾಸ್ತ್ರದ ಚೌಕಟ್ಟಿಗೆ ಹೊಂದಿಕೆಯಾಗುವ ಉದಾಹರಣೆಗಳು ಕನ್ನಡದಲ್ಲಿ ಇವೆಯೇ ಎಂದು ಹುಡುಕುತ್ತಿವವರು. ಅವರಿಗೆ ಭಾಷಾ ಶಾಸ್ತ್ರದ ಸಮ್ಮತಿ ಪಡೆದ ಚೌಕಟ್ಟುಗಳನ್ನು ಬದಲಿಸುವ ಮತ್ತು ಹೊಸ ಚೌಕಟ್ಟುಗಳನ್ನು ಹುಡುಕುವ ಬಯಕೆ ಇರುತ್ತದೆ. ಅದಕ್ಕಾಗಿ ಅವರು ಕನ್ನಡವನ್ನು ಉದಾಹರಣೆಯನ್ನಾಗಿ ಆಯ್ದುಕೊಂಡಿರುತ್ತಾರೆ. ಈ ಎರಡೂ ಗುಂಪಿನ ಕನ್ನಡ ಓದುಗಳ ನೆರವನ್ನು ಪಡೆದುಕೊಳ್ಳುವಲ್ಲಿ ನಾವು ಸೋತಿದ್ದೇವೆ.
೧. ಸರಿ. ಈಗೇನು ಮಾಡುವುದು? ಸೊಲ್ಲರಿಮೆಗಾರರು ಭಾಷಾ ಶಾಸ್ತ್ರದೊಡನೆ ತೆಗೆದಿರುವ ತಗಾದೆ ಬುಡವಿಲ್ಲ. ಇನ್ನಾದರೂ ತಪ್ಪು ತಿಳಿವಳಿಕೆಗಳು ಅಳಿಯಬೇಕು. ಅದಕ್ಕಾಗಿ ನಾವೀಗ ಭಾಷಾಶಾಸ್ತ್ರವನ್ನು ಕಲಿಸುವ ಬಗೆಯನ್ನು ಬದಲಾಯಿಸ ಬೇಕಾಗಿದೆ. ಶಾಲೆಗಳಿಂದ ಮೊದಲಾಗಿ ಈ ಬದಲಾವಣೆಯನ್ನು ತರಬೇಕು. ನಮ್ಮ ಶಾಲಾ ವ್ಯಾಕರಣಗಳನ್ನು ಹೊಸ ತಿಳಿವಿನ ಬೆಳಕಿನಲ್ಲಿ ಬರೆಯಬೇಕು. ಈಗ ಮಕ್ಕಳಿಗೆ ಕಲಿಸುತ್ತಿರುವವರಿಗೆ ಈ ಹೊಸ ಮಾದರಿಯ ಪರಿಕರಗಳನ್ನು ತಿಳಿಸುವ ಕೆಲಸವನ್ನು ಮೊದಲು ಮಾಡಬೇಕು. ಅದಕ್ಕಾಗಿ ಶಿಕ್ಷಕರ ತರಬೇತಿಯ ಠ್ಯಕ್ರಮದಲ್ಲಿ ಭಾಷೆಯ ಕಲಿಕೆಯ ಮಾದರಿಗಳನ್ನು ಬದಲಿಸಬೇಕು. ಅಂದರೆ ಹೊಸ ತಿಳಿವಿನ ಮಾದರಿಯನ್ನು ಆ ತರಬೇತಿಯಲ್ಲಿ ಅಳವಡಿಸಿದರೆ ಆಗ ಅದನ್ನು ಕಲಿತ ಉಪಾಧ್ಯಾಯರು ಮುಂದೆ ತರಗತಿಗಳಲ್ಲಿ ತಕ್ಕ ಹಾದಿಯನ್ನು ಹಿಡಿಯುತ್ತಾರೆ.
೨. ಕನ್ನಡವನ್ನು ವಿಶೇಷ ವಿಷಯವನ್ನಾಗಿ ಪದವಿ ತರಗತಿಗಳಲ್ಲಿ ಓದುವವರು ಕನ್ನಡ ಭಾಷೆಯ ರಚನೆಯನ್ನು ಅರಿಯಲು ಹಳಗನ್ನಡವನ್ನು ವಿವರಿಸುವ ಸಂಸ್ಕೃತದ ಚೌಕಟ್ಟಿನ ಸೊಲ್ಲರಿಮೆ ಗಳನ್ನು ಅವಲಂಬಿಸುವ ಬಗೆಯನ್ನು ಕೈ ಬಿಡಬೇಕು. ಹೊಸ ಸೊಲ್ಲರಿಮೆಯ ಮಾದರಿಯಲ್ಲಿ ಕನ್ನಡದ ರಚನೆಯನ್ನು ತಿಳಿಸಿ ಹೇಳಬೇಕು. ಕನ್ನಡ ಈಗಲೂ ಜನ ಬಳಸುತ್ತಿರುವ ನುಡಿ. ಅದರಲ್ಲಿ ದಿನದಿನವೂ ಬದಲಾವಣೆಗಳಾಗುತ್ತಿರುತ್ತವೆ. ಅದರಲ್ಲಿ ಹಲವು ಒಳನುಡಿಗಳಿವೆ. ಬಳಕೆಯ ಕಟ್ಟುಗಳಿವೆ. ಕನ್ನಡ ಬೇರೆ ಬೇರೆ ವಲಯಗಳಿಗೆ ಒಗ್ಗಿಕೊಳ್ಳುತ್ತಿರುವ ನುಡಿಯಾಗಿದೆ. ಕನ್ನಡ ಮಾತು ಮತ್ತು ಬರೆಹಗಳ ನಂಟು ಈಗ ಮೊದಲಿನಂತಿಲ್ಲ. ಇವೆಲ್ಲವನ್ನೂ ತಿಳಿಸಿಕೊಡುವ ಸೊಲ್ಲರಿಮೆ ಎಲ್ಲ ಕಲಿಯುವವರಿಗೆ ಸಿಗುವಂತಾಗ ಬೇಕು. ಅದಕ್ಕೆ ತಕ್ಕ ಪಠ್ಯ ಕ್ರಮ ಮತ್ತು ಓದಲು ನೆರವಾಗುವ ಹೊತ್ತಗೆಗಳನ್ನು ರಚಿಸ ಬೇಕು.
೩. ಇದೇ ಮಾದರಿಯನ್ನು ಬೇರೆ ಬೇರೆ ಹುದ್ದೆಗಳಿಗಾಗಿ ನಡೆಸುವ ಪರೀಕ್ಷೆಗಳ ಪಠ್ಯಕ್ರಮದಲ್ಲೂ ಅಳವಡಿಸಬೇಕು. ಈಗ ಕರ್ನಾಟಕ ಲೋಕ ಸೇವಾ ಆಯೋಗ, ಕೇಂದ್ರ ಲೋಕ ಸೇವಾ ಆಯೋಗಗಳು ನಡೆಸುತ್ತಿರುವ ಪರೀಕ್ಷೆಗಳಲ್ಲಿ ಕನ್ನಡ ನುಡಿಯ ತಿಳಿವನ್ನು ಕಂಡು ಕೊಳ್ಳು ನಿಡುವ ಕೇಳ್ವಿಗಳನ್ನು ಓದಿದಾಗ ನಗಬೇಕೋ ಅಳಬೇಕೋ ಎಂಬುದೇ ಗೊತ್ತಾಗುತ್ತಿಲ್ಲ. ಹೊಸ ಬಗೆಯಲ್ಲಿ ನಡೆಯಲು ಮುಂದಾಗುವ ಅಧ್ಯಾಪಕರೂ ಕೂಡ ಇಂತಹ ಪರೀಕ್ಷೆಗಳಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಲ್ಲಿ ತೊಂದರೆಯಾದೀತೋ ಎಂದು ಹಿಂಜರಿದು ಹಳೆಯ ಹಾದಿಯನ್ನೇ ಸವೆಸುತ್ತಿದ್ದಾರೆ. ಇದು ಬದಲಾಗಬೇಕು
೪. ಮೂವತ್ತು ನಲವತ್ತು ವರುಶಗಳ ಹಿಂದೆ ಭಾಷಾ ಶಾಸ್ತ್ರದ ತಿಳುವಳಿಕೆಯನ್ನು ನೀಡಲು ಮತ್ತು ಅ ಶಾಸ್ತ್ರದಲ್ಲಿ ಹೊಸ ವಿಚಾರಗಳನ್ನು ಮಂಡಿಸುವವರೊಡನೆ ಮಾತುಕತೆಯಾಡಲು ನೆರವಾಗುವ ಬೇಸಿಗೆ ಶಿಬಿರಗಳು ನಡೆಯುತ್ತಿದ್ದವು. ನಲವತ್ತು ದಿನಗಳ ಈ ಶಿಬಿರಗಳು ಹೊಡ ಅರಿವಿನ ಲೋಕದ ಬಾಗಿಲುಗಳನ್ನು ತೆರೆಯುತ್ತಿದ್ದವು. ಆದರೆ ಈಗ ಅಂತಹ ಬೇಸಿಗೆ ಶಿಬಿರಗಳು ನಡೆಯುತ್ತಿಲ್ಲ. ಇನ್ನಾದರೂ ಯಾವುದಾದರೂ ಒಂದು ಸಂಸ್ಥೆ ಈ ಹೊಣೆಯನ್ನು ತೆಗೆದುಕೊಳ್ಳಬೇಕು. ಹೊಸ ತಲೆಮಾರಿನವರಿಗೆ ಭಾಷಾ ಶಾಸ್ತ್ರದ ತಿಳಿವನ್ನು , ಆ ತಿಳಿವಿನ ಬೆಳಕಲ್ಲಿ ಕನ್ನಡವನ್ನು ವಿವರಿಸುವುದನ್ನು ಕಲಿಸ ಬೇಕು. ಇದು ಕನ್ನಡ ಮೂಲಕ ದೊರೆಯಬೇಕು ಎನ್ನುವುದನ್ನು ಮರೆಯಬಾರದು. ಈ ಬೇಸಿಗೆ ಶಿಬಿರಗಳು ಮುಂದಿನ ಹತ್ತು ವರುಶಗಳಾದರೂ ಬಿಡದೆ ನಡೆದರೆ ಆಗ ಬದಲಾವಣೆಗಳು ಕಾಣತೊಡಗುತ್ತವೆ.
೫. ಭಾಷಾ ಶಾಸ್ತ್ರವನ್ನು ಒಂದು ಆಯ್ದ ವಿಷಯವನ್ನಾಗಿ ಪದವಿ ತರಗತಿಗಳಲ್ಲಿ ಕಲಿಸುವುದೇನೋ ಸರಿ. ಆದರೆ ಅದನ್ನು ಕನ್ನಡದ ನೆಲೆಯಲ್ಲಿ ಮತ್ತು ಕನ್ನಡದ ಮೂಲಕ ಕಲಿಸುವ ಕೆಲಸ ಮೊದಲಾಗ ಬೇಕು. ಇಂಗ್ಲಿಶಿನ ಮೂಲಕ ಕಲಿತು ಹೊರ ನಾಡಿನಲ್ಲಿ ಭಾಷಾ ಶಾಸ್ತ್ರದ ಬೆಳವಣಿಗೆಗೆ ಮುಂದಾಗುವವರಿಗೆ ಇದರಿಂದ ಹಿನ್ನಡೆಯಾಗುವುದಿಲ್ಲವೇ ಎಂಬ ಹಳೆಯ ಸವೆದ ಕೇಳ್ವಿಯನ್ನು ಬದಿಗಿಡೋಣ. ಅಂತಹವರಿಗೆ ದಾರಿಗಳು ಹಲವಾರಿವೆ.ಅವುಗಳನ್ನು ಅವರು ಹುಡುಕಿಕೊಳ್ಳಬಲ್ಲರು. ನಮಗೀಗ ತುರ್ತಾಗಿ ಕನ್ನಡದಲ್ಲಿ ತಿಳಿವಳಿಕೆಯನ್ನು ಪಡೆದುಕೊಂಡು ಅದನ್ನು ತಮ್ಮ ಓದಿಗೆ ತಳಹದಿಯನ್ನಾಗಿ ಮಾಡಿಕೊಳ್ಳಬಲ್ಲವರು ಬೇಕಾಗಿದ್ದಾರೆ. ಹಾಗಾಗಿ ನಾವೀಗ ಇಂಗ್ಲಿಶ್ ಬೆನ್ನು ಹತ್ತಿರುವ ನಮ್ಮ ಹಾದಿಯನ್ನು ಬದಲಿಸಿಕೊಳ್ಳ ಬೇಕಿದೆ.
೬. ಸಾಹಿತ್ಯ ಮತ್ತು ಬೇರೆ ಬೇರೆ ಓದುಗಳಲ್ಲಿ ತೊಡಗಿರುವ ಹೆಚ್ಚಿನ ಓದಿನ ವದ್ಯಾರ್ಥಿಗಳಿಗೆ ಭಾಷಾ ಶಾಸ್ತ್ರದ ತಿಳುವಳಿಕೆ ನೀಡುವ ನಟ್ಟಿನಲ್ಲಿ ಹೆಜ್ಜಡಗಳನ್ನು ಇರಿಸ ಬೇಕು. ಸಮಾಜ ಶಾಸ್ತ್ರೆ, ಚರಿತ್ರೆ, ಮನೋವಿಜ್ಞಾನ, ತತ್ವ ಶಾಸ್ತ್ರ,ಮಾನವ ಶಾಸ್ತ್ರಗಳ ಮಟ್ಟಿಗಾದರೂ ಈ ಕೆಲಸ ಈಗ ಮೊದಲಿಗೆ ಬೇಕು. ಭಾಷಾ ಶಾಸ್ತ್ರ ಈ ಎಲ್ಲ ವಲಯಗಳಲ್ಲಿ ತನ್ನ ತಿಳುವಳಿಕೆಯ ಜಾಲವನ್ನು ಹರಡಿದೆ. ಆದರೆ ಅಲ್ಲಿ ಓದನ್ನು ಮುಂದುವರೆಸುವ ಹೋಣೆ ಭಾಷಾ ಶಾಸ್ತ್ರದ ಅರಿಗರ ಕೆಲಸ ಆಗಿದೆಯೇ ಹೊರತು ಉಳಿದ ಆಯಾ ವಲಯದ ಬಲ್ಲವರು ಭಾಷಾ ಸಾಶ್ತ್ರದ ತಿಳುವಳಿಕೆಯನ್ನು ಲೆಕ್ಕ್ಕಿಸುತ್ತಿಲ್ಲ. ಸಾಮಾಜಿಕ ಭಾಷಾ ಶಾಸ್ತ್ರ ಎನ್ನುವುದು ಭಾಷಾ ಶಾಸ್ತ್ರದ ಆಸಕ್ತಿಯಾಗಿದೆಯೇ ಹೊರತು ಸಮಾಜ ಶಾಸ್ತ್ರದವರಲ್ಲಿ ಆ ಕುರಿತು ಯಾವ ಆಸಕ್ತಿಯೂ ಇಲ್ಲ. ಇದು ಬದಲಾಗ ಬೇಕು.
೭. ಇವೆಲ್ಲವೂ ಶಿಕ್ಷಣದ ನೆಲೆಯಲ್ಲಿ ಕೈಗೊಳ್ಳ ಬೇಕಾಗಿರುವ ಯೋಜನೆಗಳು ಇದಲ್ಲದೆ ಕನ್ನಡದ ಓದುಉ ಯಾವ ದಿಕ್ಕಿನಲ್ಲಿ ಹರಿಯಬೇಕು ಮತ್ತು ಅದಕ್ಕಾಗಿ ಕೈಗೊಳ್ಳ ಬೇಕಾದ ಕೆಲಸಗಳೇನು ಎಂದು ಯೋಜಿಸುವ ಮತ್ತು ಜಾರಿಗೊಳಿಸುವ ಹೆಚ್ಚಿನ ಓದಿನ ಸಂಸ್ಥೆಯೊಂದನ್ನು ಕಟ್ಟ ಬೇಕಿದೆ. ಇದು ಹೊಸ ಸಂಸ್ಥೆಯೇ ಆಗ ಬೇಕೆಂದಿಲ್ಲ. ಈಗಿರುವ ಸಂಸ್ಥೆಗಳ ಹೊಣೆಯಾಗಿ ಇದನ್ನು ಅಳವಡಿಸಬಹುದು. ಅದಕ್ಕೆ ಬೇಕಾದ ನೆರವನ್ನು ಎಲ್ಲ ನಿಟ್ಟಿನಲ್ಲೂ ಪೂರೈಸುವ ಕೆಲಸ ಮೊದಲಾಗ ಬೇಕು
೮. ಕನ್ನಡ ಮೂಲ ದ್ರಾವಿಡ ನುಡಿಯಿಂದ ಏಕೆ ಮತ್ತು ಯಾವಾಗ ಬೇರೆಯಾಯಿತು, ಅದು ಒಂದೇ ಕಡೆ ಒಮ್ಮೆಗೇ ಬೇರೆಯಾಯಿತೇ ಇಲ್ಲವೇ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆಯಾಯಿತೇ ಎಂಬ ಕೇಳ್ವಿಗಳನ್ನು ಮುಂದಿರಿಸಿಕೊಂಡು ಓದನ್ನು ಬೆಳೆಸು ಕೆಲಸ ಈಗ ಮೊದಲಗ ಬೇಕು. ಆಗ ನಾವು ಒಪ್ಪಿಕೊಂಡು ಬಂದಿರುವ ಹಲವಾರು ನಿಲುವುಗಳನ್ನು ಬದಲಿಸಬೇಕಾಗಿ ಬರಬಹುದು. ಅಂದರೆ ಕನ್ನಡ ನುಡಿಯ ಚರಿತ್ರೆಯನ್ನು ಕಟ್ಟುವ ಕೆಲಸವನ್ನು ದೊಡ್ಡ ತಳಹದಿಯ ಮೇಲೆ ಮೊದಲು ಮಾಡಬೇಕಿದೆ.
೯. ಕನ್ನಡ ದಿನವೂ ಬದಲಾಗುತ್ತಿರುವ ನುಡಿಯಾದ್ದರಿಂದ ಅದರ ಓದಿಗೆ ನಾವು ಕಟ್ಟಿಕೊಂಡಿರುವ ಪರಿಕರಗಳನ್ನು ಒಂದೇ ಸಮನೆ ಬದಲಿಸುತ್ತಲೇ ಇರಬೇಕಾಗುತ್ತದೆ. ಕ್ನಡ ಪದನೆರಿಕೆಗೆ ಈಗ ನಾವು ಬರೆಹದ ಆಕರಗಳನ್ನು ಬಳಸುತ್ತಿದ್ದೇವೆ. ಮಾತಿನಲ್ಲಿ ದೊರಕುವ ಸಾವಿರಾರು ಪದಗಳನ್ನು ಅವುಗಳ ರೂಪಗಳನ್ನು ತಿರುಳುಗಳನ್ನು ನಾವು ನೋಡುತ್ತಲೇ ಇಲ್ಲ. ಇದು ಬೆಳೆಯುತ್ತಿರುವ ನುಡಿಯನ್ನು ಅರಿಯಲು ತಕ್ಕ ಹಾದಿಯಾಗದು. ಆದ್ದರಿಂದ ಅದಕ್ಕೆ ತಕ್ಕ ಪದನೆರಿಕೆಯೊಂದನ್ನು ಕಟ್ಟ ಬೇಕು ಮತ್ತು ಅದನ್ನು ಒಂದೇ ಸಮನೆ ಬೆಳೆಸುತ್ತಲೇ ಇರಬೇಕು. ಈ ನಿಟ್ಟಿನಲ್ಲಿ ತಕ್ಕ ಯೋಜನೆಗಳು ಜಾರಿಯಾಗಬೇಕು.
೧೦. ಹೊಸ ತಂತ್ರಜ್ಞಾನದ ನೆರವನ್ನು ಪಡೆದು ಅದಕ್ಕೆ ತಕ್ಕಂತೆ ನುಡಿಯನ್ನು ಹೊಂದಿ ಬೇಕಾಗಿದೆ. ಈ ದಿಕ್ಕಿನಲ್ಲಿ ಕನ್ನಡ ನುಡಿಯ ಹೆಜ್ಜೆಗಳು ದಿಕ್ಕಾಪಾಲಾಗಿವೆ. ಒಂದು ಕಡೆ,ಎಲ್ಲರಿಗೂ ನೆರವಾಗುವ ಮಾದರಿಗಳನ್ನು ಕಟ್ಟುವುದು ಆಗಿಲ್ಲ. ಹೊಸ ಕಾಲದ ಬೇಕುಗಳೇನು ಅದಕ್ಕೆ ಕನ್ನಡ ನುಡಿಯನ್ನು ಅಳವಡಿಸಲು ಯಾವೆಲ್ಲ ಹೆಜ್ಜೆಗಳನ್ನು ಇಡಬೇಕು ಮತ್ತು ಅದಕ್ಕೆ ತಂತ್ರಜ್ಞಾನದ ನೆರವನ್ನು ಪಡೆದುಕೊಳ್ಳಬೇಕು ಎಂಬ ಬಗೆಗೆ ತಕ್ಕ ಕೆಲಸಗಳನ್ನು ಹಮ್ಮಿಕೊಳ್ಳಬೇಕಾಗಿದೆ.
ಇವೆಲ್ಲವೂ ಕೆಲಸವು ಸೂಚನೆಗಳು ಮಾತ್ರ. ಬೇಡದ ಹಿಂಜರಿಕೆಯಿಂದ ಕನ್ನಡ ಈಗಾಗಲೇ ಹೊಸ ಹಾದಿಯ ನಡಿಗೆಯಲ್ಲಿ ಹಿಂದುಳಿದಿದೆ. ಅದೆಕ್ಲವನ್ನೂ ತುಂಬಿಕೊಮಡು ಎಲ್ಲ ನುಡಿಗಳೊಡನೆ ಸರಿಸಮನಾಗಿ ಹೆಜ್ಜೆ ಹಾಕಲು ಬೇಕಾಗಿರುವ ಕೆಲಸಗಳು ಇನ್ನೂ ನೂರಾರಿವೆ. ಅವೆಲ್ಲವನ್ನೂ ಇಲ್ಲ ಪಟ್ಟಿ ಮಾಡಲು ಆಗುವುದಿಲ್ಲ. ಆದರೆ ಈವರೆಗೆ ಆಗಿರುವ ಅಡ್ಡಿಗಳನ್ನು ಅರಿತು ಒಪ್ಪಿಕೊಂಡು ಅಲ್ಲಿಂದ ಹೊರಬಂದು ದಿಟ್ಟ ಹೆಜ್ಜೆಗಳನ್ನು ಇಡುವ ಮನಸ್ಸು ಈಗ ಬೇಕಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ