ಬುಧವಾರ, ಜನವರಿ 26, 2011

Gmail - Inbox (34) - narayana48@gmail.com

ಪದಕೋಶದಲ್ಲಿ ಒಂದು ವೃತ್ತಿಗೆ ಸೇರಿದ ಪದಗಳದ್ದೇ ಒಂದು ಗುಂಪು ಇರುತ್ತದೆ. ಬೇಸಾಯದ ಪದಗಳು, ಅಕ್ಕಸಾಲಿಕೆಯ ಪದಗಳು, ನೇಯ್ಗೆಯ ಪದಗಳು,ಮೀನುಗಾರಿಕೆಯ ಪದಗಳು ಎಂದು ಹಲವು ಬಗೆಗಳು ಒಂದು ನುಡಿಯ ಪದಕೋಶದಲ್ಲಿ ಇರುತ್ತವೆ. ಆಯಾ ಕೆಲಸಗಳನ್ನು ಮಾಡುವವರು ತಂತಮ್ಮ ಕೆಲಸಗಳಲ್ಲಿ ಈಪದಗಳನ್ನು ಬಳಸುತ್ತಾರೆ. ಈ ಪದಗಳಿಗೆ ಒಂದು ತಿರುಳು ಮಾತ್ರ ಇರುತ್ತದೆ. ಆಂದರೆ ಒಂದಕ್ಕಿಂತ ಹೆಚ್ಚು ತಿರುಳುಗಳು ಇರುವುದಿಲ್ಲ. ಅಲ್ಲದೆ ಆ ಪದಗಳು ಹೇಳುವ ತಿರುಳು ಎಲ್ಲರಿಗೂ ಒಂದೇ ಆಗಿರುತ್ತದೆ. ಬಳಕೆಯಾಗುವ ಹೊತ್ತಿನ ತಿರುಳು ಎನ್ನುವುದು ಈ ಪದಗಳಿಗೆ ಇರಲಾರವು. ಎತ್ತುಗೆಗಾಗಿ ಯವುದೇ ಕೆಲಸದ ವಲಯಕ್ಕೆ ಸೇರದ ತಲೆ ಎಂಬ ಪದವನ್ನು ನೋಡಿ. ಇದಕ್ಕೆ ದೇಹದಲ್ಲಿ ಗುರುತಿಸಬಹುದಾದ ಒಂದು ಅಂಗ ಎಂಬ ತಿರುಳು ಇರುವಂತೆ ಬಳಕೆಯಾದ ಹೊತ್ತನ್ನು ಅನುಸರಿಸಿ ಮುಂದಾಳು, ಬುದ್ದಿ ಮುಂತಾದ ತಿರುಳುಗಳೂ ಇರುತ್ತವೆ. ಆದರೆ ವೃತ್ತಿಯ ಪದಗಳು ಹೀಗಿರುವುದಿಲ್ಲ.ಕಲ್ಲು ಕೆತ್ತುವವರು ಉಳಿಯೇಟು ಎಂದರೆ ಅದು ಉಳಿ ಎಂಬ ಹತಾರವನ್ನು ಬಳಸಿ ಮಾಡುವ ಕೆಲಸವನ್ನು ಮಾತ್ರ ಹೇಳುತ್ತದೆ.
ಆದರೆ ಪದಕೋಶದಲ್ಲಿ ಒಂದು ವೃತ್ತಿಗೆ ಸೇರಿದ ಪದಗಳು ಯಾವಾಗಲೋ ಎಲ್ಲ ಜನ ಬಳಸುವ ಪದಕೋಶದೊಳಗೆ ಬಂದು ಸೇರಿ ಬಿಡುತ್ತವೆ. ಹಾಗೆ ಬಂದು ಸೇರಿದಾಗ ಮೊದಲು ವೃತ್ತಿಯ ನೆಲೆಯಲ್ಲಿ ಆ ಪದಗಳಿಗೆ ಇದ್ದ ತಿರುಳಿಗಿಂತ ಬೇರೆಯದೇ ಆದ ತಿರುಳುಗಳು ಈ ಪದಗಳಿಗೆ ಒದಗಿ ಬಿಡುತ್ತವೆ. ಕೊಯ್ಲು,ಕಳೆ,ಬಿತ್ತು,ಬೆಳೆ,ಒರೆಗೆ ಹಚ್ಚು, ಎರಕ ಹೊಯ್ಯು, ಕೆತ್ತು, ಹಾಸುಹೊಕ್ಕು, ಬಲೆಹಾಕು, ಇವೇ ಮುಂತಾದ ಪದಗಳಿಗ ಕನ್ನಡದ ಎಲ್ಲರ ಪದಕೋಶದೊಳಗೆ ಬಂದು ಸೇರಿವೆ. ಬೇರೆ ಬೇರೆ ಕೆಲಸಗಳಿಗೆ ಸೇರಿದ ಪದಗಳಾಗಿದ್ದರೂ ಅವೀಗ ಆ ಕೆಲಸಗಳ ತಿರುಳನ್ನು ಮಾತ್ರ ಹೇಳದೆ ಹೆಚ್ಚಿನ ತಿರುಳುಗಳನ್ನು ಹೊಂದಿಬಿಟ್ಟಿವೆ.
ಹೀಗೆ ವೃತ್ತಿಯ ಪದಗಳು ಎಲ್ಲರ ಪದಕೋಶದೊಳಗೆ ಬಂದು ಸೇರುವುದೊಂದು ಅಚ್ಚರಿಯಾಗಿದೆ. ಆದರೆ ಹೀಗೆ ಈ ಪದಗಳು ಯಾವಾಗ ತಮ್ಮ ವಲಸೆಯನ್ನು ಮೊದಲು ಮಾಡಿದವು ಎಂಬುದನ್ನು ನಾವಿನ್ನೂ ಹುಡುಕಿ ತೆಗೆದಿಲ್ಲ. ಈ ವಲಸೆಯು ಮೊದಲಾಗ ಕಾಳ ಮತ್ತು ಅದಕ್ಕೆ ಇದ್ದ ಕಾರಣಗಳನ್ನು ಹುಡುಕಿ ತೆಗೆದರೆ ನಮ್ಮ ನಾಡಿನ ಬದುಕಿನಲ್ಲಾದ ಬದಲಾವಣೆಯ ಕೆಲವು ಕುರುಹುಗಳು ನಮಗೆ ದೊರಕಬಹುದು.
ಇದು ಹೀಗೆ ಆಗಿರಬಹುದು ಎಂದು ಮೊದಲು ಅಂದುಕೊಳ್ಳೋಣ. ಒಂದು ವೃತ್ತಿಯಲ್ಲಿ ತೊಡಗಿದವರು ತಮ್ಮ ಕೆಲಸದಲ್ಲಿ ಬಳಕೆಯಾಗುವ ಪದಗಳ ತಿರುಳಿಗೂ ತಮ್ಮ ಬದುಕಿಗೂ ಇರುವ ನಂಟನ್ನು ಯಾವಾಗ ಹುಡುಕಲು ಮೊದಲು ಮಾಡಿದರೋ ಆಗಲೇ ಆ ಪದಗಳು ತಮ್ಮ ವಲಸೆಯನ್ನು ಮೊದಲು ಮಾಡಿರ ಬೇಕು. ವಚನಗಳನ್ನು ಕಟ್ಟಿದವರು ಬೇರೆ ಬೇರೆ ವೃತ್ತಿಗಳಿಗೆ ಸೇರಿದವರಾಗಿದ್ದರು. ಅಂಬಿಗರು,ಮಡಿವಾಳರು, ಚರ‍್ಮಗಾರರು, ಹೆಂಡ ಇಳಿಸುವವರು ಹೀಗೆ ಹಲವು ಕೆಲಸಗಳನ್ನು ಮಾಡುತ್ತಿದ್ದವರು ತಮ್ಮ ವಚನಗಳಲ್ಲಿ ತಾವು ತೊಡಗಿಕೊಂಡಿದ್ದ ಕೆಲಸಗಳಿಗೆ ಹೊಂದಿರುವ ಪದಗಳನ್ನು ಬಳಸುವುದುಂಟು. ಅವರಲ್ಲದೆ ಬೇರೆಯವರೂ ಕೂಡ ಹೀಗೆ ಬೇರೆ ಬೇರೆ ಕೆಲಸಗಳ ಪದಗಳನ್ನು ತಮ್ಮ ವಚನಗಳಲ್ಲಿ ಸೇರಿಸಿಕೊಂಡಿದ್ದಾರೆ. ಆದರೆ ವಚನಗಳಲ್ಲಿ ಈ ಪದಗಳು ತಮ್ಮ ಕೆಲಸದ ನಂಟಿನ ತಿರುಳನ್ನು ಮಾತ್ರ ತಿಳಿಸದೆ ಬದುಕಿಗೆ ಹೊಂದಿಕೊಂಡ ಬೇರೆ ಏನೋ ತಿರುಳನ್ನು ಹೇಳುತ್ತಿರುತ್ತವೆ.
ಅಂದರೇನಾಯ್ತು? ವೃತ್ತಿಗಳಲ್ಲಿ ತೊಡಗಿದವರು ತಮ್ಮ ಕೆಲಸದ ನೆಲೆಗಳನ್ನು ಕೇವಲ ದುಡಿಮೆಯ ನೆಲೆಯಲ್ಲಿ ನೋಡದೆ ಇಡೀ ಬದುಕಿಗೆ ಹೋದುವ ನೆಲೆಯಲ್ಲಿ ನೋಡ ತೊಡಗಿದ್ದರು ಎಂದು ತಾನೆ? ಹೀಗಾಗುವುದು ಯಾವಾಗ? ಇಲ್ಲಿಯೂ ಕೂಡ ನಾವು ಕೆಲವು ಊಹೆಗಳನ್ನು ಮಾಡಬೇಕಾಗುತ್ತದೆ. ತಮ್ಮ ದುಡಿಮೆಯ ನೆಲೆಗಳು ಇಡೀ ಬದುಕಿನ ನಂಟಿನಲ್ಲಿ ಪಡೆದುಕೊಳ್ಳುವ ಹೊಂದಾಣಿಕೆಯನ್ನು ಆ ಕೆಲಸದಲ್ಲಿ ತೊಡಗಿದವರು ಕಾಣ ತೊಡಗಿದ್ದಾರೆ ಎಂದರೆ ಅವರಿರುವ ಸಮಾಜದಲ್ಲಿ ಏನೋ ಒಂದು ಬದಲಾವಣೆ ನಡೆದಿದೆ ಎಂದೇ ತಿಳಿಯ ಬೇಕಾಗುತ್ತದೆ.
ಕನ್ನಡ ನಾಡಿನ ಬದುಕಿನಲ್ಲಿ ಅಂತಹ ಬದಲಾವಣೆ ವಚನ ಕಟ್ಟುವ ಹೊತ್ತಿನಲ್ಲಿ ನಡೆದಿರ ಬೇಕು. ಇದು ಕೇವಲ ಅನುಭಾವ ಮತ್ತು ಭಕ್ತಿಯ ನೆಲೆಯಲ್ಲಿ ಮಾತ್ರ ತಿಳಿದುಕೊಳ್ಳಬಹುದಾದ ಮಾತಲ್ಲ. ಆನರ ಬದುಕಿನಲ್ಲಿ ಆಗುತ್ತಿದ್ದ ಬದಲಾವಣೆ, ವೃತ್ತಿಗಳಲ್ಲಿ ತೊಡಗಿದ್ದವರು ತಮ್ಮ ವೃತ್ತಿಯ ದುಡಿಮೆಯನ್ನು ಹೊರನಿಂತು ನೋಡಲು ತೊಡಗಿದ್ದು ಇವೆಲ್ಲವೂ ಆ ಹೊತ್ತಿಗೆ ನಡೆದಿರಬೇಕು. ಇದೆಲ್ಲವನ್ನೂ ನಾವೀಗ ಹುಡುಕಿ ತೆಗೆಯಬೇಕಾಗಿದೆ.

ಸಹಜ ನ್ಯಾಯ!

ಪತ್ರಿಕೆಯ ಬರೆಹವೊಂದರ ಮೊದಲಿಗೆ "... ಸಹಜನ್ಯಾಯ ಅಲ್ಲ" ಎಂಬ ವಾಕ್ಯವನ್ನು ಓದಿದೆ. ಸಹಜ ನ್ಯಾಯ ಎಂದರೇನು? ಕರ್ನಾಟಕದ ರಾಜ್ಯಪಾಲರು ಮಾಡಿದ್ದು ಸರಿಯಲ್ಲ ಎನ್ನುವುದು ಈ ವಾಕ್ಯ ಬರೆದವರ ನಿಲುವಾಗಿದ್ದರೆ ಹಾಗೇ ಬರೆಯ ಬೇಕಿತ್ತು. ಬದಲಿಗೆ ಸಹಜ ನ್ಯಾಯ ಎಂಬ ಮಾತನ್ನು ಬಳಸಿದ್ದು ವಿಚಿತ್ರವಾಗಿದೆ. ಇದು ಇಂಗ್ಲಿಶಿನ ಸವಾರಿ. ನ್ಯಾಚುರಲ್ ಜಸ್ಟೀಸ್ ಎಂಬುದನ್ನು ಕನ್ನಡದಲ್ಲಿ ಹೇಳಲು ಹೀಗೆ ಸಹಜ ನ್ಯಾಯ ಎನ್ನಲಾಗಿದೆ. ಹೀಗೆ ಕನ್ನಡದಲ್ಲಿ ಬರೆಯಲು ಇಂಗ್ಲಿಶಿನ ತಿರುಳನ್ನು ಸಂಸ್ಕೃತದ ಪದಗಳಲ್ಲಿ ಹೇಳುವ ಹಾದಿಯಿಂದ ಹೊರಬರಲು ಆಗದೇನು?