ಬುಧವಾರ, ನವೆಂಬರ್ 16, 2011

ಕನ್ನಡ ಕ್ಲಾಸಿಕಲ್ ನುಡಿಯಾಯಿತು: ಮುಂದೇನು?


೧. ಕ್ಲಾಸಿಕಲ್ ಎಂಬ ಗುರುತು ಕನ್ನಡಕ್ಕೆ ಬೇಕೋ ಬೇಡವೋ ಎಂಬ ಚರ್ಚೆಗೆ ಈಗ ಚಲಾವಣೆ ಇಲ್ಲವಾಗಿದೆ. ಈ ಗುರುತನ್ನು ಪಡೆದುಕೊಂಡ ಮೇಲೆ ನುಡಿಯ ಬೆಳವಣಿಗೆಗೆ ಏನು ಮಾಡಬೇಕು ಎಂಬದನ್ನು ಕಂಡುಕೊಳ್ಳಬೇಕಾಗಿದೆ.ಮೊದಲಿಗೆ ಕ್ಲಾಸಿಕಲ್ ಎಂಬ ಪದಕ್ಕೆ ಶಾಸ್ತ್ರೀಯ ಎಂದು ಕರೆಯುವುದನ್ನು ನಿಲ್ಲಿಸಬೇಕಾಗಿದೆ. ಕೇಂದ್ರ ಸರ್ಕಾರ ಕ್ಲಾಸಿಕಲ್ ನುಡಿಗಳನ್ನು ಗುರುತಿಸುವ ಆದೇಶವನ್ನು ಹೊರಡಿಸಿದಾಗ ಆ ಆದೇಶದ ಹಿಂದಿ ಆವೃತ್ತಿಯಲ್ಲಿ ಕ್ಲಾಸಿಕಲ್ ಎಂಬುದಕ್ಕೆ ಶಾಸ್ತ್ರೀಯ ಎಂಬ ಪದವನ್ನು ಬಳಸಿದೆ.ನಾವು ಅದನ್ನೇ ಹೊತ್ತು ಮೆರೆಯುತ್ತಿದ್ದೇವೆ. ತಮಿಳು ನುಡಿಯು ಕ್ಲಾಸಿಕಲ್ ಎಂಬುದಕ್ಕೆ ಚೆಮ್ಮೊಳಿ( ಕನ್ನಡ ಬರೆಹದಲ್ಲಿ ಹೀಗೆ ಬರೆಯಬಹುದು.ನುಡಿಯುವ ಬಗೆ ಬೇರೆ)ಎಂದೂ ತೆಲುಗು ನುಡಿಯು ಪ್ರಾಚೀನ ಎಂದು ಕರೆದುಕೊಂಡಿವೆ. ಸಂಸಕ್‌ಋತ,ಲ್ಯಾಟಿನ್, ಹೈ ಅರಾಬಿಕ್,ಲ್ಯಾಟಿನ್ ನುಡಿಗಳನ್ನು ಕ್ಲಾಸಿಕಲ್ ನುಡಿಗಳೆಂದು ಗುರುತಿಸುತ್ತಿರುವ ಬಗೆಗೂ ಕನ್ನಡವನ್ನು ಕ್ಲಾಸಿಕಲ್ ಎಂಬು ಗುರುತಿಸುತ್ತಿರುವು ಬಗೆಗೂ ಬದಲಾವಣೆ ಇರುವುದರಿಂದ ನಾವು ಈಗಲೂ ಬೇರೆಯ ಪದವನ್ನು ಬಳಸುವುದು ಸರಿಯಾದೀತು.
೨. ಈಗ ಕರ್ನಾಟಕ ಸರ್ಕಾರ ಮತ್ತು ನುಡಿಜಾಣರು ಕ್ಲಾಸಿಕಲ್ ಕನ್ನಡವೆಂದರೆ ಕ್ರಿ.ಶ.೧೭೫೦ ರ ವರೆಗೆ ಬರೆಹಗಳಲ್ಲಿ ಕಾಣಸಿಗುವ ಕನ್ನಡವೆಂದು ಮನ್ನಣೆ ಮಾಡುವ ನಿಲುವನ್ನು ತಾಳಿದಂತಿದೆ. ಇದು ಎಲ್ಲೂ ದಾಖಲಾಗಿಲ್ಲವಾದರೂ ಕೇಂದ್ರ ಸರ್ಕಾರಗಳ ಮತ್ತು ರಾಜ್ಯ ಸರ್ಕಾರಗಳ ನಡುವೆ ನಡೆಯುತ್ತಿರುವ ಕಾಗದಪತ್ರ ವ್ಯವಹಾರಗಳಲ್ಲಿ ಈ ನಿಲುವನ್ನು ಒಪ್ಪಿರುವ ಸೂಚನೆಗಳು ಸಿಗುತ್ತಿವೆ. ಈಗ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯು ಕ್ಲಾಸಿಕಲ್ ಕನ್ನಡದ ಬೆಳವಣಿಗೆಗೆ,ಅಧ್ಯಯನಕ್ಕೆ ಬೇಕಾದ ಯೋಜನೆಗಳನ್ನು ರೂಪಿಸುವ ಕೆಲಸವನ್ನು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಗೆ ವಹಿಸಿದೆಯಷ್ಟೆ.( ತೆಲುಗಿಗೆ ಸಂಬಂಧಿಸಿದ ಕೆಲಸವನ್ನೂ ಇದೇ ಸಂಸ್ಥೆ ನಿರ್ವಹಿಸಬೇಕಿದೆ) ಈ ಸಂಸ್ಥೆಯು ಕ್ರಿ.ಶ.೧೭೫೦ ರ ವರೆಗಿನ ಬರೆವಣಿಗೆಯಲ್ಲಿ ಕಂಡುಬರುವ ಕನ್ನಡವನ್ನೇ ಕ್ಲಾಸಿಕಲ್ ಕನ್ನಡವೆಂದು ಒಪ್ಪುವ ಹಾದಿಯಲ್ಲಿರುವಂತಿದೆ. ಈ ನಿಲುವನ್ನು ಮರಳಿ ಪರಿಶೀಲಿಸಬೇಕಿದೆ.
೩. ಎಲ್ಲಕ್ಕಿಂತ ಮೊದಲು ಕನ್ನಡವೆಂದರೆ ಬರೆವಣಿಗೆ,ಅದರಲ್ಲೂ ಸಾಹಿತ್ಯ ಕೃತಿಗಳು ಎಂದು ತಿಳಿಯುವ ನೆಲೆಯಿಂದ ಹೊರಬರಬೇಕು. ಕನ್ನಡದ ಹೆಮ್ಮೆಯ ಗುರುತಾಗಿ ಪಂಪನನ್ನೋ, ಕುಮಾರವ್ಯಾಸನನ್ನೋ, ಹರಿಹರನನ್ನೋ ಬೆರಳು ಮಾಡಿ ತೋರಿಸುವುದಲ್ಲಿ ಮುಳುಗಿಹೋಗಿರುವ ನಾವು ಈ ಚೌಕಟ್ಟಿನಿಂದ ಹೊರಬೀಳಬೇಕು. ಕನ್ನಡವೆಂದರೆ ಜನರಾಡುವ ನುಡಿ ಮತ್ತು ಆ ನುಡಿಯಲ್ಲಿ ಹುದುಗಿರುವ ಬದುಲಿನ ಬಗೆ. ಈ ಕನ್ನಡದ ಒಳನುಡಿಗಳಲ್ಲಿಹೊರಗೆ ಕಾಣದಿರುವ ನೆನಪುಗಳಿವೆ. ಅದೆಲ್ಲವೂ ಕನ್ನಡ ಮತ್ತು ಅದೇ ಕನ್ನಡ ಎನ್ನುವುದನ್ನು ಮರಳಿ ನೆನಪು ಮಾಡಿಕೊಳ್ಳಬೇಕು. ಬರೆಹ ಮತ್ತು ಸಾಹಿತ್ಯಕ್ಕೆ ಒತ್ತನ್ನು ನೀಡುವುದಾದರೆ ಆಗ ಮಾತಿನಲ್ಲಿ ಅಡಗಿರುವ ತಿಳುವಳಿಕೆಯನ್ನೆಲ್ಲ ಅನುಬಂಧವಾಗಿ ನೋಡುವ ಇಂದಿನ ಮಾದರಿಯೇ ಮುಂದೆಯೂ ನೆಲೆ ನಿಂತರೆ ಅಚ್ಚರಿಯೇನಲ್ಲ..
೪. ಏನೇ ಮಾಡಲಿ. ಆದು ಈವರೆಗೆ ನಡೆದಿರುವ ಓದಿನ ಚೌಕಟ್ಟನ್ನು ಬೆಳೆಸುವಂತಿರಬೇಕು. ಕನ್ನಡದಲ್ಲಿ ಹೇಳಿದ್ದನೇ ಹೇಳುವ ಬರೆದದ್ದನ್ನೇ ಬರೆಯುವ ಸವೆಕಲು ಹಾದಿ ಎಲ್ಲರ ಮನ್ನಣೆಯನ್ನು ಪಡೆದುಕೊಂಡುಬಿಟ್ಟಿದೆ. ಒಮ್ಮೆ ಮನ್ನಣೆ ದೊರಕಿದ ಬರೆಹಗಳು ಮತ್ತೆಮತ್ತೆ ಕಲಿಕೆಯ ಚೌಕಟ್ಟಿನೊಳಗೆ ನೆಲೆನಿಂತು ಹೊಸ ಚಿಂತನೆಗಳು ನುಗ್ಗದಂತೆ ನೋಡಿಕೊಳ್ಳುವುದು ಇಂದಿಗೂ ಮುಂದುವರೆದಿದೆ. ಒಂದು ಉದಾಹರಣೆಯನ್ನು ನೋಡಿ. ೧೯೨೮ರ ಸುಮಾರಿಗೆ ಹೊರಬಂದ ಮೈಸೂರು ವಿಶ್ವವಿದ್ಯಾಲಯದ ’ಕನ್ನಡ ಕೈಪಿಡಿ’ ಆಗ ಒಂದು ಬಲವಾದ ಆಕರಗ್ರಂಥವಾಗಿತ್ತು ತೊಂಬತ್ತು ವರ್ಷಗಳು ಕಳೆದರೂ ಅಲ್ಲಿಂದ ಮುಂದೆ ನುಡಿಯ ಚರಿತ್ರೆ,ಸೊಲ್ಲರಿಮೆ,ಛಂದಸ್ಸು ಇವೆಲ್ಲ ವಲಯಗಳಲ್ಲಿ ನಮ್ಮ ಅರಿವು ಹೆಚ್ಚಾಗಿದ್ದರೂ ಆ ಗ್ರಂಥದ ಚೌಕಟ್ಟಿನಿಂದ ನಮ್ಮ ವಿದ್ಯಾರ್ಥಿಗಳು ಹೊರಬಂದಿಲ್ಲ. ಆ ಹೊತ್ತಗೆಯನ್ನು ಮರಳಿ ಇಂದಿನ ತಿಳುವಳಿಕೆಯ ನೆಲೆಯಲ್ಲಿ ಮರಳಿ ಕಟ್ಟುವ ಕಡೆಗೂ ನಮ್ಮ ಬಲ್ಲವರು ಚಿಂತಿಸಿಲ್ಲ. ಕ್ಲಾಸಿಕಲ್ ಕನ್ನಡ ಅಧ್ಯಯನ ಇದೇ ಹಾದಿಯನ್ನು ಹಿಡಿಯಬಾರದು.
೫. ಈವರೆಗೆ ಕನ್ನಡ ತಿಳುವಳಿಕೆಯನ್ನು ಅರಿಯಲು ನಡೆಸಿಎಉವ ಎಲ್ಲ ಅಧ್ಯಯನಗಳನ್ನು ಒತ್ತಟ್ಟಿಗಿಟ್ಟು ನೋಡುವ ಕೆಲಸ ಮೊದಲಾಗಬೇಕು. ಯಾರು ಎಲ್ಲಿ ಏನೆಲ್ಲ ಕೆಲಸಗಳನ್ನು ಮಾಡಿದ್ದಾರೆ ಎಮಬುದನ್ನು ತಿಳಿಸಿಕೊಡುವ ಯಾವ ಆಕರಕೇಂದ್ರವೂ ಈಗ ಇಲ್ಲ. ಎಲ್ಲವೂ ಚದುರಿ ಹೋಗಿದೆ. ಎಷ್ಟೋ ಅಧ್ಯಯನಗಳ ಮಾಹಿತಿ ಮಾತ್ರ ನಮಗೆ ದೊರಕುತ್ತಿದೆ. ಆ ಅಧ್ಯಯನಗಳನ್ನು ನೋಡುವುದು ಕೂಡ ಈಗ ಆಗುತ್ತಿಲ್ಲ. ಇವೆಲ್ಲವನ್ನೂ ಒಂದೆಡೆಗೆ ಕೂಡಿಸಿ ವಿಂಗಡಿಸಿ ಕೊಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಯೋಜನೆಯೊಂದನ್ನು ರೂಪಿಸಬೇಕು. ಈಗ ಕೇವಲ ಹೊತ್ತಗೆಗಳನ್ನು ಕೂಡಿಸುವ ಕೆಲಸವಲ್ಲ; ಚದುರಿ ಹೋಗಿರುವ ಸಾವಿರಾರು ದಾಖಲೆಗಳನ್ನು ಒಂದಡೆಗೆ ತರುವ ಕೆಲಸ. ಸಾಂಸ್ಥಿಕವಾಗಿಯೇ ಇದು ನಡೆಯ ಬೇಕಿದೆ. ಇದು ಮೊದಲಾಗಬೇಕು.
೬. ಕನ್ನಡ ನಾಡಿನ ಜಾಣರು ಯಾವ ಬಗೆಯ ಅಧ್ಯಯನಗಳು ನಡೆಯ ಬೇಕು,ಹೇಗೆ ನಡೆಯಬೇಕು ಎಂಬುದನ್ನು ವಿವರಿಸುವ ಕೆಲಸವನ್ನು ಮಾಡಬೇಕಿದೆ. ಇದರಿಂದ ಮುಂದಿನ ತಲೆಮಾರು ಈ ಅಧ್ಯಯನಗಳನ್ನು ಕೈಗೊಂಡು ಮುನ್ನಡೆಯಲು ನೆರವಾಗುತ್ತದೆ. ಇದಕ್ಕಾಗಿ ಹಲವು ಬಗೆಯ ತರಬೇತಿಗಳನ್ನು ನೀಡಬೇಕಾಗಿ ಬರಬಹುದು. ಹೀಗೆ ತರಬೇತಿ ನೀಡುವಾಗ ಅಧ್ಯಯನದ ಗುರಿ ಮತ್ತು ಹಾದಿಗಳನ್ನು ತೋರಿಸುವ ಬಗೆ ಬದಲಾಗಬೇಕು. ನಮಗೆ ಯವುದು ಮುಖ್ಯವೋ ಅದೇ ಜನರಿಗೂ ಮುಖ್ಯ ಎಂಬ ಹಟವನ್ನು ನುಡಿಜಾಣರು ಕೈಬಿಡಬೇಕು. ಆನರಿ ಒಳಿತಿಗೆ ಏಣಾಗ ಬೇಕು ಎಂಬುದನ್ನು ಕಣ್ಣೆದುರಿಗೆ ಇರಿಸಿಕೊಳ್ಳದ ಮತ್ತು ಅವರ ಬದುಕಿನ ಹಾದಿಯನ್ನು ಒಳಗೊಳ್ಳದ ಇಂದಿನ ಎಷ್ಟೋ ಹಾದಿಗಳನ್ನು ನಾವು ಕೈಬಿಡಬೇಕಾಗಿದೆ.
೭. ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದ ಹಲವಾರು ಆದ್ಯಯನಗಳು ಕನ್ನಡ ಬದುಕನ್ನೇ ಕುರಿತಾಗಿದ್ದರೂ ಅವೆಲ್ಲವೂ ಕನ್ನಡ ನುಡಿಯಲ್ಲಿ ಇಲ್ಲ. ಇಂಗ್ಲಿಶ್ ಮೊದಲಾಗಿ ಕೆಲವು ಯೂರೋಪಿನ ನುಡಿಗಳಲ್ಲಿವೆ. ಅವೆಲ್ಲವನ್ನು ಮತ್ತೊಮ್ಮೆ ಪರಿಶೀಲಿಸುವ ಕೆಲವನ್ನು ಕೈಗೊಳ್ಳಬೇಕು. ಈಗಲೂ ಕನ್ನಡ ಬದುಕನ್ನು ನೋಡುವ ನೂರಾರು ಅಧ್ಯಯನಗಳು ಕನ್ನಡ ನುಡಿಯಲ್ಲಿ ನಡೆಯುತ್ತಿಲ್ಲ. ಬೇರೆ ಬೇರೆ ನಾಡುಗಳ ಅಧ್ಯಯನಕಾರರು ಇಂಗ್ಲಿಶಿನಲ್ಲಿ ತಮ್ಮ ತಿಳುವಳಿಕೆಗಳನ್ನು ಮಂಡಿಸುತ್ತಿದ್ದಾರೆ. ಈ ತಿಳುವಳಿಕೆಗಳು ಕನ್ನಡದ ಓದಿನ ಭಾಗವಾಗಿ ಬದಲಾಗುತ್ತಿಲ್ಲ. ಹಾಗಾದಾಗ ಮತ್ರ ಅಂತಹ ಓದಿನ ಹೆಚ್ಚಳ ಮತ್ತು ಕೊರತೆಗಳು ಕಾಣ ತೊಡಗುತ್ತವೆ. ಒಂದು ನಿದರ್ಶನವನ್ನು ನೋಡೋಣ. ತೀರಾ ಈಚೆಗೆ ಅಮೆರಿಕದ ವಿದ್ವಾಂಸ ಫ್ರಾಂಕ್ಲಿನ್ ಸೌತ್ವರ್ತ್ ’ಲಿಂಗ್ವಿಸ್ಟಿಕ್ ಅಂತ್ರಪಾಲಜಿ ಆಫ್ ಸೌತ್ ಏಸಿಯಾ’ ಎಂಬ ತಮ್ಮ ಅಧ್ಯಯನ ಕೃತಿಯನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಅವರು ಕನ್ನಡದ ಮಾಹಿತಿಯನ್ನು ಬಳಸಿಕೊಂಡಿರುವುದು ತುಂಬಾ ಕಡಿಮೆ. ಅದರಲ್ಲೂ ಇಂಗ್ಲಿಶ್ ನುಡಿಯಲ್ಲಿ ದೊರಕುವ ಕನ್ನಡ ನುಡಿಯ ಮಾಹಿತಿಯನ್ನು ಮಾತ್ರ ಬಳಸಿಕೊಂಡಿದ್ದಾರೆ. ಕಿಟೆಲ್ ನಿಘಂಟು ಅವರಿಗೆ ಆಕರ ವಾಗುತ್ತದೆಯೇ ಹೊರತು, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟು ಅಲ್ಲ. ಹೀಗಾಗಿ ಆ ಅಧ್ಯಯನಕ್ಕೆ ಮಿತಿಗಳು ಒದಗಿವೆ. ಇದನ್ನು ನಿವಾರಿಸುವುದು ಹೇಗೆ? ಕನ್ನಡದ ಮಾಹಿತಿಯನ್ನು ಇಂಗ್ಲಿಶಿನಲ್ಲಿ ಒದಗಿಸುವ ವ್ಯವಸ್ಥೆಯನ್ನು ಮಾಡುವುದು ಒಂದು ದಾರಿಯಾಗಿ ಕಾಣುತ್ತದೆ. ಆದರೆ ಅದು ಸರಿಯಾದ ಹಾದಿಯಲ್ಲ. ಬದಲಿಗೆ ಇಂತಹ ಅಧ್ಯಯನಗಳನ್ನು ಕನ್ನಡದ ಮಾಹಿತಿಯ ಬೆಳಕಿನಲ್ಲಿ ಮರು ಪರಿಶೀಲನೆಗೆ ಗುರಿಪಡಿಸುವ ಕೆಲಸವನ್ನು ಕೈಗೊಳ್ಳುವುದು ಸರಿಯಾದ ಹಾದಿ ಯಾದೀತು. ಈ ಬಗೆಯ ಕೆಲಸಗಳು ಮೊದಲಾಗಬೇಕಿದೆ.
೮. ಎಲ್ಲವನ್ನೂ ಈ ಟಿಪ್ಪಣಿಯಲ್ಲಿ ಪಟ್ಟಿ ಮಾಡಲು ಆಗುವುದಿಲ್ಲ. ಕನ್ನಡ ನುಡಿಯು ಕನ್ನಡ ಬದುಕಿಗೆ ಸೇರಿದ್ದೆಂದು ತಿಳಿದು ನಮ್ಮ ಅಧ್ಯಯನಗಳನ್ನು ನಡೆಸುವ ಮೂಲಕ ಕ್ಲಾಸಿಕಲ್ ಕನ್ನಡವೆಂದರೆ ಅಲ್ಲೋ ಕೆಲವು ಬರೆಹಗಳ ದಾಖಲೆಗಳನ್ನು ಮತ್ತೆಮತ್ತೆ ಹಿಂಜುತ್ತ ಕೂರುವ ಕೆಲಸಗೇಡಿತನದಿಂದ ಹೊರಬರಬಹುದು. ದಿಟಬಾಗಿ ಬಾಯ್‌ಎರೆಯ ಕನ್ನಡಕ್ಕೆ ತಕ್ಕ ಮನ್ನಣೆಯನ್ನು ದೊರಕಿಸಲು ಆಗ ಅನುವಾದೀತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ