ಗುರುವಾರ, ನವೆಂಬರ್ 24, 2011

ಬೇರೆ ನಾಡುಗಳಲ್ಲಿ ಕನ್ನಡದ ಸಸಿಗಳನ್ನು ನೆಡುವುದೀಗ ಆಗಬೇಕಿದೆಯೇ?


ಕನ್ನಡ ನುಡಿ, ಬದುಕು ಬರಹಗಳನ್ನು ಬೇರೆ ನುಡಿಯವರಿಗೆ ಕಲಿಸುವ, ಆ ಮೂಲಕ ಕನ್ನಡದ ಕಸುವನ್ನು ಬಲಗೊಳಿಸಲು ಕೆಲಸಕ್ಕಾಗಿ ಬೇರೆ ಬೇರೆ ನಾಡುಗಳಲ್ಲಿ ಕನ್ನಡ ’ಪೀಠ’ಗಳನ್ನು ನೆಲೆಗೊಳಿಸಬೇಕೆಂಬ ಮಾತು ಈಗ ಹೆಚ್ಚಾಗಿ ಕೇಳತೊಡಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವೇ ಮೊದಲಾಗಿ ಹಲವರು ಈ ನಿಟ್ಟಿನಲ್ಲಿ ತಮ್ಮ ದನಿ ಸೇರಿಸುತ್ತಿದ್ದಾರೆ. ಇಂತಹ ಮಾತು ಮೊದಲಾಗಿ ಸರಿ ಸುಮಾರು ಇಪ್ಪತ್ತೈದು ವರುಶಗಳೇ ಸಂದಿವೆ. ನಾನು ಇದನ್ನೇ ನಂಬಿದ್ದವನು. ಆಗ ಅಮೆರಿಕದ ಒಂದು ವಿಶ್ವವಿದ್ಯಾಲಯದಲ್ಲಿ ಕನ್ನಡ ಓದಿನ ಸವಲತ್ತು ದೊರೆಯುವಂತೆ ಮಾಡಲು ಅಲ್ಲಿನ ಕನ್ನಡಿಗರೊಡನೆ ಮುಂದಾವನೇ ಸರಿ. ಆದರೆ ಈಗ ಅನ್ನಿಸುತ್ತಿರುವುದೇ ಬೇರೆ. ಹೀಗೆ ಮಾಡಬೇಕೆಂಬ ಉಮೇದು ನಮ್ಮ ಕಡೆಯಿಂದ ಮೊದಲಾಗಿರುವಂತೆ ಬೇರೆ ನಾಡುಗಳ ಜನರಲ್ಲಿ ನಮಗೆ ಕನ್ನಡ ಬೇಕು ; ಕನ್ನಡ ಬದುಕನ್ನು ಅರಿಯಬೇಕು ಎಂಬ ತುರ್ತು ನಮಗೆ ಕಾಣಬರುತ್ತಿಲ್ಲ. ಅವರಲ್ಲಿ ಇಂತಹ ಬಯಕೆ ಮೂಡುವಂತೆ ನಮ್ಮ ಸಾಮಗ್ರಿಗಳನ್ನು ಮಾರುಕಟ್ಟೆಗೆ ತಕ್ಕಂತೆ ಹೊಂದಿಸಿಡಬೇಕೆಂಬ ನಿಲುವು ನಮ್ಮದಾಗಬೇಕೇ? ಒಂದು ವೇಳೆ ಕನ್ನಡ ನುಡಿ,ಬರಹ ಮತ್ತು ಬದುಕನ್ನು ಬೇರೆ ನುಡಿಯವರು ಅರಿಯುವಂತೆ ಮಾಡುವಲ್ಲಿ ನಾವು ಗೆದ್ದೆವಾದರೆ ಅದರಿಂದ ನಮ್ಮ ಸುತ್ತಮತ್ತಣ ಬದುಕು ಹಸನಾಗುವುದೇ?
ಕನ್ನಡ ನುಡಿಯನ್ನು ಈ ನಾಡಿನಲ್ಲೇ ಎಲ್ಲರ ನುಡಿಯನ್ನಾಗಿ ಮಾಡಲು, ನಮ್ಮ ಬದುಕನ್ನು ಕಟ್ಟಿಕೊಳ್ಳುವ ನೆಲೆಯನ್ನಾಗಿ ಕನ್ನಡವನ್ನು ಬೆಳೆಸಲು ಇನ್ನೂ ಅಗಿಲ್ಲ. ಆ ದಿಕ್ಕಿನಲ್ಲಿ ನಾವು ಏನೂ ಮಾಡುತ್ತಿಲ್ಲ. ಬದಲಿಗೆ ಇಲ್ಲಿ ಹುಟ್ಟಿ ಬೆಳೆವ ಮಕ್ಕಳಿಗೆ ಕನ್ನಡ ಒಂದು ಹೊರೆ ಎಂಬಂತೆ ಮಾಡುತ್ತಿದ್ದೇವೆ. ಕನ್ನಡ ಬದುಕನ್ನು ಅರಿಯಲು ಇಂಗ್ಲಿಶನ್ನು ನೆಮ್ಮಿ ಹೊರಟಿದ್ದೇವೆ. ಹೆಚ್ಚಿನ ಕಲಿಕೆಯಲ್ಲಿ ಕನ್ನಡಕ್ಕೆ ದೊರೆಯಬೇಕಾದ ಜಾಗವನ್ನು ನೀಡಲು ನಮಗಿನ್ನೂ ಆಗಿಲ್ಲ. ಈ ದಿಕ್ಕಿನಲ್ಲಿ ಬೇಕಾದ ಕೆಲಸಗಳನ್ನು ಕೈಗೊಳ್ಳದೆ ಯಾವುದೋ ನಾಡುಗಳಲ್ಲಿ ಕನ್ನಡ ಸಸಿಯನ್ನು ನಟ್ಟು ಬೆಳೆಸಿ ಹೆಮ್ಮೆ ಪಡುವ ಹುಮ್ಮಸ್ಸು ಏಕೆ? ಅದೂ ಇಂಗ್ಲಿಶ್ ಇಲ್ಲವೇ ಯೂರೋಪಿನ ನುಡಿಗಳನ್ನಾಡುವ ನಾಡುಗಳಲ್ಲೇ ಇಂತಹ ಕೆಲಸಗಳನ್ನು ಮಾಡಬೇಕೆಂದು ಮುಂದಾಗಿದ್ದೇವೆ. ಚೀನಾ,ಜಪಾನ್,ಕೊರಿಯಾ, ಟಿಬೆಟ್ ಮುಂತಾದ ನಾಡುಗಳು ನಮ್ಮ ಕಣ್ಣೆದುರಿಗೆ ಸುಳಿಯುವುದೂ ಇಲ್ಲ.ಇದೂ ಒಂದು ಅಚ್ಚರಿಯೇ ಸರಿ.
ಇಂಡಿಯಾದ ಬೇರೆ ನುಡಿಗಳನ್ನಾಡುವ ಕಡೆಗಳಲ್ಲಿ ಕೂಡ ಕನ್ನಡವೆಂಬುದು ಕಡೆಗಣನೆಗೆ ಒಳಗಾಗಿದೆ ಎಂಬು ಕೊರಗುತ್ತೇವೆ. ಸರಿ. ಆದರೆ ಹೀಗಾಗಿರುವುದಕ್ಕೆ ಎರಡು ನೆಲೆಗಳಿವೆ. ೧.ಬೇರೆಯವರಿಗೆ ನಮ್ಮ ನುಡಿ,ಬದುಕು,ಬರಹಗಳನ್ನು ತಿಳಿಯುವ ಬಯಕೆ ಇಲ್ಲದಿರುವುದಕ್ಕೆ ನಮ್ಮನ್ನು ನಾವು ಅವರೆದರು ಸುಳಿದಾಡಿ ಒಲಿಸಿಕೊಳ್ಳದಿರುವುದೇ ಕಾರಣ; ಅದಕ್ಕಾಗಿ ಕೋಟಿಗಟ್ಟಲೆ ಕಾಸನ್ನು ಮುಡಿಪಿಡಬೇಕೆಂದು ಬಯಸುವುದರಿಂದ ಏನೂ ಆಗುವುದಿಲ್ಲ. ಬೇರೆ ನುಡಿಯವರು ನಮ್ಮನ್ನು ಅರಿಯಲು ಮುಂದಾಗುವಂತೆ ನಮ್ಮ ಕಸುವನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ. ನಾವೇ ನಮ್ಮಲ್ಲಿ ನಂಬಿಕೆಯನ್ನು ಗಟ್ಟಿ ಮಾಡಿಕೊಳ್ಳಬೇಕಾಗಿದೆ. ಈಗ ಏನಾಗಿದೆ? ಕಲಿಕೆಯಲ್ಲಿ ಕನ್ನಡಕ್ಕೆ ಹಿಂದಿನ ಮಣೆ; ಸಂಸ್ಕೃತ ಮತ್ತು ಇಂಗ್ಲಿಶಿನ ಹೊರೆಯಿಂದ ಬದುಕನ್ನು ಅರಿಯುವ ನಮ್ಮ ಹತ್ಯಾರುಗಳು ನಮಗೇ ಗೊತ್ತಿಲ್ಲದಂತೆ ನಮ್ಮನ್ನು ಇನ್ನಷ್ಟು ಕುಗ್ಗಿಸುತ್ತಿವೆ. ಜನರ ಬದುಕಿಗೂ ನಾವು ಕಟ್ಟುತ್ತಿರುವ ಅರಿವಿಗೂ ಯಾವ ನಂಟೂ ಇಲ್ಲವೆಂಬಂತಾಗಿದೆ. ಇದು ಇಂಗ್ಲಿಶನ್ನೇ ಮೊದಲ ಮಣೆಯಲ್ಲಿ ಕೂರಿಸಿಕೊಂಡವರು ನೀಡುತ್ತಿರುವ ತಿಳುವಳಿಕೆಗೆ ಹೊಂದುವಂತೆ, ಕನ್ನಡದ ಮೂಲಕ ಕನ್ನಡ ಬದುಕನ್ನು ಅರಿಯುವ ಕಡೆಗೆ ಮೊಗ ಮಾಡಿರುವವರು ಕಟ್ಟುತ್ತಿರುವ ತಿಳುವಳಿಕೆಗೂ ಹೊಂದುತ್ತದೆ. ಏಕೆಂದರೆ ಕನ್ನಡ ಮೂಲಕ ದೊರೆಯುತ್ತಿರುವ ಈ ತಿಳಿವಳಿಕೆಯೂ ಇಂಗ್ಲಿಶಿನ ನೆರಳೇ ಆಗಿದೆ.
೨. ಬೇರೆ ನಾಡುಗಳಲ್ಲಿ ಹಲವಾರು ವರುಶಗಳಿಂದ ಕನ್ನಡ ನುಡಿ,ನಾಡು,ಬರಹ,ಬದುಕನ್ನು ಅರಿತು ,ಅದರ ಕಸುವನ್ನು ತಿಳಿಯಲು ಮುಂದಾದವರೂ ಇದ್ದಾರೆ. ಅವರಲ್ಲಿ ಅಲ್ಲಿ ಹೋಗಿ ಓದು ಮುಂದುವರೆಸಿದ ಕನ್ನಡಿಗರಿರುವಂತೆ ಬೇರೆ ನುಡಿಯನ್ನಾಡುವವರೂ ಇದ್ದಾರೆ. ಇಂತಹವರೂ ಇಲ್ಲಿಬಂದು ತಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಂಡಿರುವುದೂ ಉಂಟು. ಆದರೆ ಅವರ ಎಲ್ಲ ಬರಹಗಳೂ ಇಂಗ್ಲಿಶ್, ಫ್ರೆಂಚ್, ಜರ‍್ಮನ್ ಮುಂತಾದ ನುಡಿಗಳಲ್ಲಿವೆ. ಈಗ ಹೆಚ್ಚಿನ ಕಲಿಕೆಯಲ್ಲಿ ತೊಡಗಿಕೊಂಡಿರುವ ಸಾವಿರಾರು ಮಕ್ಕಳಿಗೆ ಆ ತಿಳುವಳಿಕೆ ದಕ್ಕುತ್ತಲೇ ಇಲ್ಲ. ಆ ತಿಳಿವೆಲ್ಲ ಅಚ್ಚಿನ ಪುಟಗಳಲ್ಲಿ ಅಡಗಿ ಕುಳಿತಿದೆ. ಅದೆಲ್ಲವನ್ನೂ ಕನ್ನಡ ಮಕ್ಕಳು ಓದ ಬೇಕೆಂದು ಈ ಮಾತು ಹೇಳುತ್ತಿಲ್ಲ. ಇಂಗ್ಲಿಶಿನಲ್ಲಿ ಇಲ್ಲವೇ ಬೇರೆ ನುಡಿಗಳಲ್ಲಿ ಮೈತಳೆದ ಆ ತಿಳಿವಿಗೆ ಕನ್ನಡದ ಚೌಕಟ್ಟು ಇಲ್ಲ. ಅದು ಈ ಬದುಕಿನೊಳಗಿಂದ ಹುಟ್ಟಿದ ತಿಳುವಳಿಕೆಯಲ್ಲ. ಹಾಗಾಗಿ ಅದರ ಹೆಚ್ಚುಪಾಲು ನಮಗೆ ತಿಳಿಯದಿದ್ದರೂ ಕೊರತೆ ಏನಿಲ್ಲ.
ಈಗ ನಾವು ಹೊರ ನಾಡುಗಳಲ್ಲಿ ಕನ್ನಡದ ಬಾವುಟವನ್ನು ನೆಡಬೇಕೆಂದು ಹೊರಟಿರುವುದು ಮತ್ತೆ ಇಂತಹುದೇ ತಿಳಿವನ್ನು ಕಟ್ಟಲೆಂದು ತಾನೆ? ಜೊತೆಗೆ ಇಂತಹ ತಿಳುವಳಿಕೆಯನ್ನು ಕಟ್ಟುವವರಿಗೆ ಬೇಕಾದ ಪರಿಕರ, ತರಬೇತುಗಳನ್ನು ನೀಡುವುದೇ ನಮ್ಮ ಗುರಿಯೇನು? ಇದರಿಂದ ಈ ನಾಡ ಜನರಿಗೆ ದೊರಕುವುದಾದರೂ ಏನು?
ಇವೆಲ್ಲ ಮಾತುಗಳು ನುಡಿಯ ಬಗೆಗೆ ಹೆಮ್ಮೆ ಇಲ್ಲದವರ ಬಡಬಡಿಕೆ ಎಂದು ತಿಳಿಯಬಾರದು.ಹಾಗೆ ತಿಳಿದು ದಿಟವಾದ ಗೊಂದಲವನ್ನು ಅರಿಯದೇ ಬೇರೆ ಕಡೆ ಮೊಗದಿರುಹ ಬಾರದು. ಮನೆಗೆದ್ದು ಮಾರುಗೆಲ್ಲು ಎಂಬ ನಾಣ್ನುಡಿಯನ್ನು ನೆನೆಯೋಣ. ಇಲ್ಲಿ ನಮ್ಮ ತಿಳಿವಿನ ಹಾದಿಗಳನ್ನು ನೇರ್ಪಡಿಸಿಕೊಂಡು ಕನ್ನಡ ನುಡಿ ಜನರ ನಂಬಿಕೆಯ ನೆಲೆಯಾಗುವಂತೆ ಮಾಡಬೇಕಿದೆ. ಇದು ಆಗದೆ ಬರಿ ಹೆಮ್ಮೆಯನ್ನೇ ನಂಬಿ ಮುನ್ನುಗ್ಗುವುದು ಸರಿಯಾಗದು ಎಂಬ ಅರಿವು ಮೂಡಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ