ಸೋಮವಾರ, ನವೆಂಬರ್ 21, 2011

ನೆಲದ ಮೇರೆಗಳ ಕರ್ನಾಟಕ

ನೆಲದ ಮೇರೆಗಳನ್ನು ಕರ್ನಾಟಕ ಎಂದು ಕರೆದದ್ದು ಒಂದು ರಾಜಕೀಯ ಆಯ್ಕೆ. ಅದಕ್ಕಾಗಿ ಹಂಬಲಿಸಿ,’ಹೋರಾಡಿದ’ವರೂ ಬಿಸಿಲುಗುದುರೆಯ ಬೆನ್ನು ಹತ್ತಿದ್ದವರು. ಬೇರೆಬೇರೆ ನುಡಿಯಾಡುವವರ ಆಳ್ವಿಕೆಯಿಂದ ಹೊರಬರಲು ’ಕರ್ನಾಟಕ ರತ್ನ ಸಿಂಹಾಸನದ’ ಒಡೆಯರಾಗಿದ್ದ ಮೈಸೂರು ಅರಸರ ನೆರಳಿಗಾಗಿ ಕಾತರಿಸಿದ್ದವರು. ಕರ್ನಾಟಕವೆಂದು ಹುಟ್ಟಿದ್ದು ದಿಟವಾಗಿ ’ವಿಶಾಲ ಮೈಸೂರು’ ಮಾತ್ರವೇ ಆಗಿತ್ತು.. ಮೊದಲಿದ್ದ ಹಳೆಯ ಮೈಸೂರು ಇನ್ನಷ್ಟು ಜಿಲ್ಲೆಗಳಿಗೆ ಹರಡಿಕೊಂಡು ದೊಡ್ಡದಾಯಿತು. ದಿಟವಾಗಿ ಕರ್ನಾಟಕವೆಂಬ ಬಿಂಬವೊಂದು ಜನರಲ್ಲಿ ಬೇರೂರಲು ಇರಬೇಕಾಗಿದ್ದ ಬದುಕಿನ ನೆಲೆಯ ಒತ್ತಡಗಳು ಅಂದು ಬಲವಾಗಿ ಇದ್ದಂತೆ ತೋರುವುದಿಲ್ಲ.
ಇಂದಿಗೂ ಕರ್ನಾಟಕವನ್ನು ನೆಲದ ಗಡಿಗೆರೆಗಳು ಕಟ್ಟುತ್ತಿರುವ ನಾಡಿನ ಮೂಲಕವೇ ರಾಜಕೀಯವಾಗಿ ಉಸಿರಾಡಿಸುತ್ತ ಉಳಿಸಿಕೊಳ್ಳಲಾಗಿದೆ. ಬದುಕಿನ ತೆರದ ದಾರಿಗಳು ಜನರು ಈ ಗಡಿಗೆರೆಗಳನ್ನು ದಾಟಿ ಒಳಹೊರಗೆ ನಡೆಯುತ್ತಿಲೇ ಇದ್ದಾರೆ .ಇವರು ಕೂಲಿಕಾರರಿರಬಹುದು; ಉದ್ದಿಮೆದಾರರಿರಬಹುದು, ಬಗೆಬಗೆಯ ವ್ಯಾಪಾರಗಳಲ್ಲಿ ತೊಡಗಿದವರಿರಬಹುದು. ಇವರೆಲ್ಲರಿಗೂ ಕರ್ನಾಟಕವೆಂದರೆ ಇಂದು ರಾಜಕೀಯ ಚಹರೆಯೇ ಹೊರತು ಕುವೆಂಪು ಬಯಸಿದಂತೆ ಮಂತ್ರವಾಗಲಿಲ್ಲ. ಹಾಗಾಗಲಿಲಗಲ ಎಂದು ಹಳಹಳಿಕೆಯಲ್ಲಿ ಈ ಮಾತನ್ನು ಹೇಳುತ್ತಿಲ್ಲ. ಬದಲಿಗೆ ಇಂದು ನಾವು ನೋಡುತ್ತಿರುವ ಬೇರು ಸತ್ತ ಮರದಂತ ಕರ್ನಕದ ಉಸಿರು ಕುಗ್ಗಿಸಲು ಐದಾರು ದಾಸಕಗಳಿಂದ ಎಡೆಬಿಡದೆ ಹುನ್ನಾರಗಳು ನಡೆಯುತ್ತಲೇ ಇವೆ ಎಂಬುದನ್ನು ಗಮನಿಸಿದಾಗ ಹೀಗಾಗಿದ್ದು ತಟಕ್ಕನೇ ಆದುದಲ್ಲ. ಹೀಗಾಗಲೆಂಬ ಬಯಕೆಯೂ ರಾಜಕೀಯವಾಗಿ ಕೆಲಸಮಾಡಿದಂತಿದೆ.
ಕರ್ನಾಟಕವೆಂಬ ರಾಜ್ಯದ ಚಹರೆಯನ್ನು ಕಟ್ಟಲು ಚರಿತ್ರೆ,ಸಮಾಜ,ರಾಜಕಾರಣ,ಬದುಕಿನ ಬಗೆ ಇವೇ ಮುಂತಾದ ಹಲವು ನೆಲೆಗಳನ್ನು ಬಳಸಿಕೊಳ್ಳಲಾಗಿದೆ. ಈ ನೆಲೆಗಳಲ್ಲಿ ಕಟ್ಟಿದ ಕರ್ನಾಟಕಗಳು ಒಂದರೊಡನೊಂದು ತಾಳೆಯಾಗುತ್ತವೆಯೇ ಎಂಬುದನ್ನು ಅರಿಯಲು ಯಾರೂ ಮುಂದಾಗಿಲ್ಲ. ಹಾಗೆ ನೋಡಲು ಹೊರಟರೆ ಇವೆಲ್ಲವೂ ಬೇರೆ ಬೇರೆ ಆಗಿಯೇ ಉಳಿದು ಬಿಟ್ಟಿವೆ ಎನ್ನುವುದು ಕಣ್ಣಿಗೆ ರಾಚುವಂತಿದೆ. ಇವೆಲ್ಲವನ್ನೂ ಹಿಡಿದು ಕಟ್ಟುವ ಕರ್ನಾಟಕವೆಂಬ ಒಂದು ಗುರುತು ಮೈದಳೆಯಲು ಈವರೆಗೆ ಆಗಿಲ್ಲ. ಚರಿತ್ರೆಯ ನೆರವಿನಿಂದ ಕಟ್ಟಿದ ಕರ್ನಾಟಕವೆಂಬುದು ಒಂದು ಗುರುತಾಗಿ ಕಂಡರೂ ಅದು ಜನರ ಹಕ್ಕಾಗಿ ಉಳಿದಿಲ್ಲ; ಅದು ಅವರಿಗೆ ಬೇಡದ ಹೊರೆ. ತಾವು ಅದಕ್ಕೆ ಹಕ್ಕುದಾರರು ಎಂದು ಅವರು ತಿಳಿದಂತೆ ತೋರುವುದಿಲ್ಲ. ಇದಲ್ಲದೆ ಬದುಕಿನ ದಾರಿಗಳನ್ನು ಕಟ್ಟಿಕೊಳ್ಳಲು ಬೇಕಾದ ಅವಕಾಶಗಳು ಕಡಿಮೆಯಾಗುತ್ತ ಹೋಗುತ್ತಿರುವಾಗ ಜನರಿಗೆ ಈ ನೆಲವೆಂಬುದು ತಾವು ಬೇರು ಬಿಡಬೇಕಾದ ಜಾಗವೆಂದು ಅನಿಸುತ್ತಲೇ ಇಲ್ಲ.
ಒಗ್ಗೂಡಿದ ಕರ್ನಾಟಕ ಮೈದಳೆದಾಗ ಅದೊಂದು ಹರಿದ ಬಟ್ಟೆಯನ್ನು ಹೊಲಿಗೆ ಹಾಕಿ ನಯಗಾರಿಕೆಯಿಂದ ಹೊಸದರಂತೆ ಮಾಡಿರಿಸಿದ್ದಾಗಿತ್ತು. ದಿನಗಳೆಂದಂತೆ ಆಗ ಇದ್ದ ಹರಕಲುಗಳಲ್ಲದೆ ಹೊಸ ಬಿರುಕುಗಳು ಸೀಳುಗಳು ಈಗ ಕಾಣತೊಡಗಿವೆ. ನೆಲ, ನೀರು, ನೆಲದೊಳಗಿನ ಸಂಪತ್ತು, ಬೆಳೆ, ಕುಲಕಸುಬು ಇವು ಯಾವುವೂ ಈಗ ಜನರನ್ನು ಈ ನೆಲಕ್ಕೆ ಕಟ್ಟಿ ಹಾಕುತ್ತಿಲ್ಲ. ಎಲ್ಲವೂ ಅವರಿಂದ ದೂರವಾಗ ತೊಡಗಿವೆ. ಹೊಟ್ಟೆಹೊರೆಯಲು ಇದ್ದ ದಾರಿಗಳು ಬಹುಪಾಲು ಜನರಿಗೆ ಮುಚ್ಚಿಹೋಗಿವೆ.
ಕಳೆದ ಐವತ್ತೈದು ವರುಶಗಳಲ್ಲಿ ಆಡಳಿತವನ್ನು ಬೇರು ಮಟ್ಟಕ್ಕೆ ತರಬೇಕೆಂಬ ಎಲ್ಲ ಯೋಜನೆಗಳೂ ತಲೆಕೆಳಗು ಪರಿಣಾಮವನ್ನು ಉಂಟುಮಾಡಿವೆ. ಅಧಿಕಾರದ ಹಿಡಿತ ಇನ್ನೂ ಬೆಂಗಳೂರು ದೆಹಲಿಗಳಲ್ಲೇ ಉಳಿದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜಾತಿಯ ಸೀಳುಗಳು ಜನರ ಬದುಕನ್ನು ಬರಿದುಗೊಳಿಸುತ್ತ ನಡೆದಿವೆ. ಬಡವರು, ಕೆಳಜಾತಿಯವರು,ಹಿಂದುಳಿದವರು, ಹಿಂದುಗಳು ಎನಿಸಿಕೊಳ್ಳದವರು ಈಗ ಪಡಿಪಾಟಲಿನ ಕಡಲಿನಲ್ಲಿ ಮುಳುಗುತ್ತಿದ್ದಾರೆ. ನಗರಗಳು ಲೂಟಿಕೋರರ ತಾಣಗಳಾಗಿವೆ. ಇಲ್ಲಿ ಅಷ್ಟಿಷ್ಟು ಇದ್ದವರ ಕನಸುಗಳೂ ಸೋಪಿನ ಗುಳ್ಳೆಗಳಂತೆ ಬಣ್ಣತೋರಿ ಮರೆಯಾಗುತ್ತಿವೆ.
ಇದೆಲ್ಲ ಹೀಗೇಕಾಯಿತು? ಇದಕ್ಕೆ ಎರಡು ನೆಲೆಗಳಲ್ಲಿ ಕಾರಣಗಳನ್ನು ಹುಡುಕಬೇಕಾಗುತ್ತದೆ. ಒಂದು ಕರ್ನಾಟಕ ರಾಜ್ಯವೆಂಬುದು ಮೈದಳೆಯುವಾಗಲೇ ಅಡಕವಾಗಿದ್ದು ಆಗ ಕಣ್ಣಿಗೆ ಕಾಣದೆ ಇದ್ದ ಕಾರಣಗಳು. ಇನ್ನೊಂದು ಕಾರಣವೆಂದರೆ ರಾಜ್ಯ ಮೈದಳೆದ ಮೇಲೆ ನಡೆದ ಆಡಳಿತದ ದಿಕ್ಕುದೆಸೆಗಳಿಂದಾಗಿ ರಾಜ್ಯವೆಂಬುದು ಕೇವಲ ನಕಾಶೆಯಾಗಿ ಮಾತ್ರ ಉಳಿಯುವಂತಾದುದು. ಮೊದಲನೆಯದನ್ನು ನೋಡೋಣ. ಕರ್ನಾಟಕ, ಕನ್ನಡ ಮತ್ತು ಕನ್ನಡಿಗರು ಎಂಬ ಮೂರೂ ಎಂದೂ ಮುಪ್ಪುರಿಯಾಗಿ ಹೆಣೆದುಕೊಂಡಿರಲೇ ಇಲ್ಲ. ಹೀಗಾಗಿ ಈ ಮೂರನ್ನೂ ಹೆಣೆಯಲೆಂದೇ ಕಟ್ಟಿದ ಕರ್ನಾಟಕ ತನ್ನ ಒಡಲಿನಲ್ಲೇ ಸೀಳುಗಳನ್ನು ಹೊಂದಿತ್ತು. ಕರ್ನಾಟಕದಲ್ಲಿ ಇದ್ದವರು ಕನ್ನಡಿಗರು ಎಂಬ ಹೇಳಿಕೆಯೀಗ ಹಲವು ನೆಲೆಗಳಲ್ಲಿ ಹುಸಿಯಾಗ ತೊಡಗಿದೆ. ಶಿಕ್ಷಣ, ಉದ್ಯೋಗ, ಉದ್ದಿಮೆಯ ಸವಲತ್ತು ಇವೇ ಮುಂತಾದ ವಲಯಗಳಲ್ಲಿ ಯಾರನ್ನು ಕನ್ನಡಿಗರು ಎಂದು ಕರೆಯ ಬೇಕೆಂಬುದು ಬೇಕಾಬಿಟ್ಟಿಯಾದ ಉತ್ತರಗಳನ್ನು ಪಡೆದುಕೊಂಡಿದೆ. ಅಲ್ಲದೆ ಆ ಉತ್ತರಗಳು ವರುಶಗಳು ಕಳೆದಂತೆ ಬದಲಾಗುತ್ತಲೇ ನಡೆದಿವೆ. ಅಂದರೆ ಮೊದಲಿದ್ದ ಸೀಳುಗಳು ರಾಚುವಂತಾಗಲು ಬಳಿಕ ನಡೆದ ಆಡಳಿತದ ತೀರ್ಮಾನಗಳು ಕಾರಣವಾಗಿವೆ ಎಂದಾಯ್ತು.
ಇನ್ನು ಕನ್ನಡ ಮತ್ತು ಕರ್ನಾಟಕ ಎನ್ನುವುದೂ ಕೂಡ ಬೆಸುಗೆಯನ್ನು ಪಡೆದು ಕೊಂಡಿಲ್ಲ. ದಿನಗಳೆದಂತೆ ಇವೆರಡೂ ಒಂದಕ್ಕೊಂದು ನಂಟಿಲ್ಲದಂತೆ ಸಾಗತೊಡಗಿವೆ. ಕಲಿಕೆ, ಆಡಳಿತ ಮತ್ತು ವಾಣಿಜ್ಯ ವಲಯಗಳಲ್ಲಿ ಕನ್ನಡವೆಂಬುದು ಈಗ ಕೇಳುವರಿಲ್ಲದ ಮಗು. ಕನ್ನಡ-ಇಂಗ್ಲಿಶ್‌ಗಳ ನಂಟು ಈಗ ಎಲ್ಲೆಲ್ಲೋ ಡಿಕ್ಕಿ ಹೊಡೆಯುತ್ತಿದೆ. ಹಳೆಯ ಹೋಲಿಕೆಯನ್ನು ಬಳಸಿ ಹೇಳುವುದಾದರೆ ಈ ಎರಡೂ ನುಡಿಗಳಲ್ಲಿ ಒಂದು ಕಾಲಿಗೆ ಕಟ್ಟಿದ ಗುಂಡು ಹಾಗಾಗಿ ಅದು ತೇಲಲು ಬಿಡುವುದಿಲ್ಲ; ಇನ್ನೊಂದು ನುಡಿ ಸೊಂಟಕ್ಕೆ ಕಟ್ಟಿದ ಬೆಂಡು. ಹಾಗಾಗಿ ಅದು ಮುಳುಗಲು ಬಿಡುವುದಿಲ್ಲ. ಆದರೆ ನೀರಿಗೆ ಬಿದ್ದವರಿಗೆ ಯಾವ ನುಡಿ ಗುಂಡು ಮತ್ತು ಯಾವ ನುಡಿ ಬೆಂಡು ಎಂಬುದು ಬಿಡಿಸಲಾಗದ ಕಗ್ಗಂಟಾಗಿ ತೋರತೊಡಗಿದೆ. ಕನ್ನಡ ಮಾತಾಡುವವರ ರಾಜ್ಯವೆಂಬ ಹೆಸರಿನಲ್ಲಿ ಮೊದಲಾದ ಕರ್ನಾಟಕವೀಗ ಕನ್ನಡದ ಉಸಿರುಗಟ್ಟಿಸುತ್ತಿದೆ. ರಾಜ್ಯಾಡಳಿತವಂತೂ ಇಂಗ್ಲಿಶ್ ತೇಲಿಸುವುದೆಂದೂ ಕನ್ನಡ ಮುಳುಗಿಸುವುದೆಂದು ನಂಬಿದೆ; ಹಾಗೆ ನಂಬಲು ಜನರನ್ನು ಒತ್ತಾಯಿಸುತ್ತಿದೆ.
ಈ ನೆಲೆಯಲ್ಲೇ ಕನ್ನಡ ಮತ್ತು ಕನ್ನಡಿಗರು ಎಂಬ ಎಳೆಗಳ ನಡುವೆ ಉಂಟಾಗಿರುವ ಸೀಳನ್ನು ನೋಡಬಹುದು. ಒಂದೇ ನುಡಿಯನ್ನು ಬಲ್ಲವರು ಮತ್ತು ಅದು ಕನ್ನಡ ಮಾತ್ರ ಆಗಿರುವವರು ಕನ್ನಡಿಗರು ಎಂದು ಕರೆದರೆ ಆಗ ಕನ್ನಡಿಗರೆಂಬುವವರೇ ಕಡಿಮೆಯಾಗುತ್ತ ನಡೆದಿದ್ದಾರೆ. ವಯಸ್ಸಾದವರು, ಊರೂರು ಸುತ್ತಲಾರದ ಇಲ್ಲವೇ ದುಡಿಮೆಯಲ್ಲಿ ತೊಡಗಿಸಿಕೊಳ್ಳಲಾಗದ ಹೆಂಗಸು ಮಾತ್ರವೇ ಕನ್ನಡಿಗರೆನಿಸಿಕೊಳ್ಳ ಬಲ್ಲರು. ಹಾಗಾಗಿ ಈ ಎರಡು ಎಳೆಗಳು ಈಗ ಹೆಣೆದುಕೊಳ್ಳಲಾರವು.
ಕಳೆದ ಐವತ್ತೈದು ವರುಶಗಳು ರಾಜ್ಯವೆಂಬುದು ಜನರನ್ನು ಕಾಯುವ ,ಅವರ ಬೇಕುಬೇಡಗಳಿಗೆ ಮಿಡಿಯುವ ನೆಲೆ ಎಂಬುದು ಹುಸಿ ಎಂಬುದನ್ನು ತೋರಿಸಕೊಟ್ಟಿವೆ. ಏಕೆಂದರೆ ರಾಜ್ಯವೆಂಬ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ನಾವು ಕಟ್ಟಿಕೊಂಡಿರುವ ನೆಲೆಗಳು ಜನರ ದುಡಿಮೆಯ ಬಹುಪಾಲನ್ನು ನುಂಗಿ ಹಾಕುತ್ತಿವೆ; ಆದರೆ ಅದರಿಂದ ಜನರಿಗೆ ಏನೇನೂ ನೆರವು ದೊರೆಯುತ್ತಿಲ್ಲ. ಜನರಲ್ಲಿ ನಾಡಿನ ಹಿರಿಮೆಯ ಬಗೆಗೆ ಹೆಮ್ಮೆಯನ್ನು ಮೂಡಿಸಲು ಏನೆಲ್ಲ ಕಸರತ್ತುಗಳನ್ನು ಉತ್ಸವ,ಪ್ರಶಸ್ತಿ, ಆಚರಣೆಗಳ ಮೂಲಕ ಯತ್ನಿಸಿದರೂ ಅದೆಲ್ಲವೂ ಕೆಲಸಕ್ಕೆ ಬರುತ್ತಿಲ್ಲ. ಸಮ್ಮೇಳನಗಳಿಗೆ, ಉತ್ಸವಗಳಿಗೆ ಜನರು ಮುಗಿಬಿದ್ದು ಬರುವುದನ್ನು ಬಣ್ಣಿಸುತ್ತ ಇದೆಲ್ಲವೂ ನಾಡಿನ ಬಗೆಗೆ ಜನರಲ್ಲಿ ಹೆಮ್ಮೆ ಮೂಡುತ್ತಿದೆ ಎಂಬುದರ ಸೂಚನೆ ಎಂದು ನಂಬಿಸಲು ತೊಡಗಿದ್ದರೂ ದಿಟ ಬೇರೆಯೇ ಆಗಿದೆ. ಜನರು ಏಕೆ ಎಲ್ಲಿಗಾದರೂ ಮುನ್ನುಗುತ್ತಾರೆ ಎಂಬುದಕ್ಕೆ ಬೇರೆಯೇ ವಿವರಣೆ ಬೇಕಿದೆ. ಅದು ಹೆಮ್ಮೆಯ ಗುರುತಂತೂ ಅಲ್ಲ.
ಮತ್ತೆ ಮೊದಲ ಮಾತಿಗೆ ಬರೋಣ.ಬೆಳೆ ನೀಡುವ ಜಮೀನು, ಕಾಡುಗಳು, ಹರಿಯುವ ನೀರು, ತಲಾತಲಾಂತರದಿಂದ ಬಂದ ಕಸುಬುಗಳು ಈಗ ಜನರ ಹಕ್ಕಾಗಿ ಉಳಿದಿಲ್ಲ. ಜನರ ಒಳಿತು ಎಂದರೆ ಅವರ ಅಂದಂದಿನ ಹೊಟ್ಟೆಯ ಬೇಡಿಕೆಗಳನ್ನು ಪೂರೈಸುವುದು ಎಂದು ತಿಳಿದಿರುವುದರಿಂದ ಅದಕ್ಕೆ ಬೇಕಾದಂತೆ ಎಲ್ಲವೂ ಅಣಿಗೊಳ್ಳುತ್ತಿವೆ. ಆದರೆ ಜನರು ಸಮುದಾಯವಾಗಿ, ಪೌರ ಸಮಾಜವಾಗಿ ಬೆಳೆಯುವುದಾದರೆ ಆಗ ಆಯಾ ಹೊತ್ತಿನ ಬೇಡಿಕೆಗಳು ಈಡೇರಿದರೆ ಸಾಲದು. ಅದನ್ನು ಮೀರಿದ ನಾಳೆಗಳ ಕನಸನ್ನು, ಹೊಣೆಯನ್ನು ಮತ್ತು ಹಕ್ಕುಗಳನ್ನು ಹುಟ್ಟಿಹಾಕಬೇಕಾಗುತ್ತದೆ. ಆದರೆ ಈ ದಿಕ್ಕಿನಲ್ಲಿ ಏನೂ ನಡೆಯುತ್ತಿಲ್ಲ. ಹಾಗಾಗಿ ಇದೆಲ್ಲವೂ ದಾರವಿಲ್ಲದ ಸೂಜಿಯಿಂದ ಮಾಡಿದ ಹೊಲಿಗೆಯಂತಾಗಿದೆ.
ಇಪ್ಪತ್ತೊಂದನೆಯ ಶತಮಾನ ಬಯಸುವ ನೆಲೆಗಳಲ್ಲಿ ರಾಜ್ಯಗಳಿಗೆ ಜಾಗ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಒಂದು ವೇಳೆ ಜಾಗ ಇದ್ದರೂ ಅದು ಈಗಿರುವ ಮಾದರಿಯಲ್ಲಿ ಇರಲಾರದು. ಅದರ ಚಹರೆಗಳನ್ನು ಹುಡಕಬೇಕಿದೆ. ಅದಕ್ಕೆ ತಕ್ಕಂತೆ ಮುಂದಿನ ಹೆಜ್ಜೆ ಇಡಬೇಕಾಗಿದೆ. ಅಲ್ಲಿಯವರೆಗೆ ರಾಜ್ಯವೆಂಬುದು ಜನರ ಬೆನ್ನಿನ ಹೊರೆಯೇ ಹೊರತು ಅವರ ಬದುಕನ್ನು ನಿರಾಳಗೊಳಿಸುವ ದಿಟವಂತೂ ಅಲ್ಲ. ಈಗ ನಾಡಗೀತೆಯನ್ನು ಹಾಡುವಾಗ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಬೇಕೆಂದು ಹೇಳುತ್ತಿದ್ದಾರಷ್ಟೆ. ಆಲಾಪ, ಸ್ವರ ಜೋಡಣೆಯಲ್ಲಿ ಆ ಹಾಡು ಮುಗಿಯುವ ವೇಳೆಗೆ ನಿಂತವರು ಚಡಪಡಿಕೆಗೆ ಒಳಗಾಗುವುದನ್ನು ನೋಡುತ್ತಿದ್ದೇವೆ. ಇದನ್ನೇ ಮಾದರಿ ಎನ್ನುವುದಾದರೆ ಮುಂಬರುವ ದಿನಗಳಲ್ಲಿ ಕರ್ನಾಟಕವೆಂಬ ರಾಜ್ಯ ವ್ಯವಸ್ಥೆಯು ಹೀಗೆ ಮುಂದುವರೆದರೆ ಅದು ಒಂದು ದೊಡ್ಡ ಆಕಳಿಕೆಯಂತೆ ತೋರಿದರೆ ಅಚ್ಚರಿ ಪಡಬೇಕಾಗಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ