ಗುರುವಾರ, ಮಾರ್ಚ್ 24, 2011

ಕನ್ನಡದಲ್ಲಿ ಹೊಸ ಪದ


ಕನ್ನಡದಲ್ಲಿ ಹೊಸ ಪದಗಳನ್ನು ಕಟ್ಟಲು ಬಳಸುವ ಹಾದಿ ಹೀಗಿದೆ: ೧) ಇಂಗ್ಲಿಶಿನ ಪದರಚನೆಯನ್ನು ಮತ್ತು ಅದರಲ್ಲಿರುವ ಪದಗಳನ್ನು ಕನ್ನಡದ ಪದಗಳಲ್ಲಿ ಇಲ್ಲವೇ ಕನ್ನಡದಲ್ಲಿ ಬಳಕೆಯಲ್ಲಿರುವ ಬೇರೆ ನುಡಿಗಳ ಪದಗಳಲ್ಲಿ ಹೇಳುವುದು. ಇದಕ್ಕಾಗಿ ತರ‍್ಜುಮೆಯ ಹಾದಿಯನ್ನು ಹಿಡಿಯುವುದುಂಟು. ಹಸಿರು ನಿಶಾನೆ, ಬೆಳಕು ಚಲ್ಲು, ತಪ್ಪು ಸಂದೇಶ ರವಾನಿಸು, ಆಳವಾದ ಕಳಕಳಿ, ಸನ್ನಿವೇಶ ಗಂಭೀರ ಮುಂತಾದವು ಇಂತಹ ರಚನೆಗಳು ೨) ಹೀಗೆ ತರ‍್ಜುಮೆ ಮಾಡುವ ಬದಲು ಹೊಸ ಪದಗಳನ್ನು ಕನ್ನಡದ ಇಲ್ಲವೇ ಕನ್ನಡದಲ್ಲಿ ಬಳಕೆಯಲ್ಲಿರುವ ಪದಗಳ ನೆರವು ಪಡೆದು ಕಟ್ಟುವುದು. ಮುಂದಿನ ಪದರಚನೆಗಳನ್ನು ನೋಡಿ: ನೆರೆಪೀಡಿತ, ಬರಪೀಡಿತ, ನ್ಯಾಯಬದ್ಧ,ಅಶ್ರುತಪ್ತ, ಹಿಂಸಾಮುಕ್ತ,ಕರಮುಕ್ತ, ಕಾರಣೀಭೂತ, ರಜಾಪ್ರಯುಕ್ತ, ತಕ್ತ ಸಿಕ್ತ ಮುಂತಾದ ಪದಗಳಲ್ಲಿ ಎರಡೆರಡು ಪದಗಳಿವೆ. ಕೊನೆಯದನ್ನು ಮತ್ತೆ ಮತ್ತೆ ಬಳಸಿ ಹೊಸ ಹೊಸ ಪದಗಳನ್ನು ಕಟ್ಟಲಾಗುತ್ತದೆ.
ಇಂತಹ ಕೆಲವು ಪದಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:-ಇಕ,-ಕ, -ಕಾರ, -ಯೋಗ್ಯ, -ಯುಕ್ತ, -ಆಕಾಂಕ್ಷಿ, -ಆರೂಢ, -ಸ್ಥಿತ, -ಪೂರ‍್ಣ, -ಅನ್ವಿತ,- ಪೀಡಿತ, -ಭರಿತ, -ಉಕ್ತ, -ಬದ್ಧ, -ಮುಕ್ತ, -ಭುತ, -ಪ್ರಧಾನ, -ಪ್ರದಾನ, -ಪ್ರಯುಕ್ತ, -ಸಿಕ್ತ, -ಸಮ, --ಸಮಾನ, -ಕಾರಕ, -ಈನ, -ಹೀನ, -ಪೂರ‍್ವ, -ಪೂರ‍್ವಕ, -ರಹಿತ, -ಉತ್ತರ, - ಕರ, -ಮಯ, -ಈಯ, -ರಾಹಿತ್ಯ, -ಶೀಲ, -ಶಾಲಿ, -ವಾದ, -ವಾದಿ, -ವಂತ, -ಲೀನ, -ರಿಕ್ತ, -ತರ, -ಆತ್ಮಕ, -ಅರ‍್ಹ, -ಗ್ರಸ್ತ, -ಆಚಾರ, -ಅತೀತ, -ಪೂರಿತ, -ಕೃತ, -ಅರ‍್ಥಕ ಮುಂತಾದವು. ಇಂತಹ ಪದಗಳ ಪಟ್ಟಿ ಇನ್ನೂ ದೊಡ್ಡದಿದಿದೆ. ಇವುಗಳಲ್ಲಿ ಕೆಲವು ಬಿಡಿಯಾಗಿಯೂ ಬಳಕೆಯಗ ಬಲ್ಲವು;ಉಳಿದವು ಇನ್ನೊಂದು ಪದದ ಜೊತೆಗೆ ಮಾತ್ರ ಬರುತ್ತವೆ. ಇವೆಲ್ಲವನ್ನೂ ಬಳಸಿಯೇ ಹೊಸ ಪದಗಳನ್ನು ಕಟ್ಟುತ್ತಿದ್ದೇವಲ್ಲ. ಇದನ್ನು ಬಿಟ್ಟರೆ ಬೇರೆ ದಾರಿ ಇಲ್ಲವೇ?
ಇವಲ್ಲದೆ ಇನ್ನೂ ಕೆವು ಪದಗಳಿವೆ. ಮೇಲೆ ಪಟ್ಟಿ ಮಾಡಿ ಪದಗಳೆಲ್ಲ ಹೊಸ ಪದಗಳಲ್ಲಿ ಎರಡನೆಯ ಪದಗಳಾಗಿದ್ದರೆ ಈ ಹೊಸ ಪಟ್ಟಿಯ ಪದಗಳು ಮೊದಲಲ್‌ಏ ಬರುತ್ತವೆ. ಉಪ-, ಬಹು-, ಮಹಾ-, ಪೂರ‍್ವ-, ಉತ್ತರ-, ಸರ‍್ವ-, ಅ-, ನಿಃ-, ದುಃ-, ಸು-, ಸ-, ಪುನಃ-, ಪ್ರತಿ-, ಪರಿ-, ಸಿದ್ಧ- ಮುಂತಾದ ಕೆಲವು ಪದಗಳನ್ನು ಇಲ್ಲಿ ಪಟ್ಟಿ ಮಾಡಿದೆ. ಇದೂಣ ಮೊದಲ ಪಟ್ಟಿಯಂತೆ ದೊಡ್ಡದಲ್ಲ. ಅಲ್ಲದೆ ಇಲ್ಲಿ ಬರುವ ಹಲವು ಪದಗಳಿಗೆ ಬಿಡಿ ಬಳಕೆ ಇಲ್ಲ.
ಈಗ ನಾವೇನು ಮಾಡಬಹುದು. ಹೊಸ ಪದಗಳನ್ನು ಕಟ್ಟ ಬೇಕಾದಾಗ ಸವೆದ ಹಾದಿಯನ್ನು ಬಿಟ್ಟು ಕನ್ನಡದ ಪದಗಳನ್ನೇ ಬಳಸಿ ಕಟ್ಟುವ ಕಡಿದಾದ ಆದರೆ ನಾವು ತುಳಿಯಲೇ ಬೇಕಾದ ಹಾದಿಯನ್ನು ಹಿಡಿಯಬೇಕಾಗಿದೆ. ಕೆಲವು ಪದಗಳನ್ನು ಮಾದರಿಗಾಗಿ ಇಲ್ಲಿ ಕಟ್ಟ್ಟಿಕೊಡಲಾಗಿದೆ. ರಕ್ತಸಿಕ್ತ=ನೆತ್ತರು ಅಂಟಿದ, ಬಲಹೀನ=ಕಸುವಿಲ್ಲದ, ಆಶ್ಚರ‍್ಯಕರ= ಅಚ್ಚರಿ ತುಂಬಿದ, ಮಲಿನರಹಿತ= ಕೊಳೆ ಇಲ್ಲದ, ಸ್ವಯಂಕೃತ= ತಾನೇ ಮಡಿದ, ಬರಪೀಡಿತ= ಬರಹಿಡಿದ,ಬರಬಿದ್ದ, ಹೊಗೆಭರಿತ= ಹೊಗೆ ತುಂಬಿದ
ಹೀಗೆ ಏಕೆ ಮಾಡಬೇಕು? ೧) ಹೊಸ ಪದಗಳನ್ನು ಕಟ್ಟುವವರು ಆಗ ತಾವು ಕಟ್ಟಿ ಬಳಸುತ್ತಿರುವ ಪದದ ತಿರುಳು ಏನು ಎಂಬುದನ್ನು ಚೆನ್ನಾಗಿ ತಿಳಿಸುಕೊಳ್ಳು ಆಗುತ್ತದೆ. ೨) ಓದುವವರು ಇಲ್ಲವೇ ಕೇಳುವವರು ತಾವು ಓದುತ್ತಿರುವ ಇಲ್ಲವೇ ಕೇಳುತ್ತಿರುವ ಪದವನ್ನು ಸುಮ್ಮನೆ ನಂಬುವ ಬದಲು ಅದರ ತಿರುಳನ್ನು ತಾವೂ ಕೂಡ ಅರಿತು ಕೊಳ್ಳುವರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ