ಶನಿವಾರ, ಫೆಬ್ರವರಿ 5, 2011

ಕನ್ನಡ ಮುಂದಿನ ದಿನಮಾನಗಳಲ್ಲಿ ಉಳಿಯುವುದೇ; ಉಳಿದರೂ ಈಗಿರುವ ಅದರ ಚಹರೆಗಳನ್ನು ಕಾಯ್ದಕೊಳ್ಳುವುದೇ ಎಂಬ ಕಾತಾಳದಲ್ಲಿ ಹೂವಿನ ಪಕಳೆಗಳನ್ನು ಒಂದೊಂದಾಗಿ ಕೀಳುತ್ತ ಕುಳಿತಿರುವವರನ್ನು ನೀವು ಎಲ್ಲ ಕಡೆಗಳಲ್ಲೂ ಕಂಡಿರುತ್ತೀರಿ. ಇವರಲ್ಲಿ ಹಲವು ಬಗೆಯವರಿದ್ದಾರೆ. ಕೆಲವರು ಕನ್ನಡಕ್ಕೆ ಒದಗಿರುವ ಬಿಕ್ಕಟ್ಟುಗಳಿಂದ ಅದನ್ನು ಪಾರು ಮಾಡಲು ಏನು ಮಾಡಬೇಕೆಂಬ ಹಾದಿಗಳನ್ನು ಹುಡುಕುತ್ತಿರುವವರು ಕೆಲವರು. ಮತ್ತೆ ಕೆಲವರು ಆಗುವುದೆಲ್ಲ ಒಳ್ಳೆಯದಕ್ಕೆ ಅಲ್ಲವೇ ಎಂದು ಕೈಚೆಲ್ಲಿ ಕುಳಿತವರು. ಕನ್ನಡದ ಒಳಿತನ್ನು ಕಾಯ್ದುಕೊಳ್ಳ ಬೇಕೆಂದವರಲ್ಲಿ ಕೆಲವರು ಕನ್ನಡ ತನ್ನ ಮಡಿತನವನ್ನು ಬಿಟ್ಟುಕೊಡಬಾರದೆಂದೂ ಈಗಿರುವಂತೆ ಸಂಸ್ಕೃತದ ಸವಾರಿಗೆ ಹೆಗಲನ್ನು ಒಡ್ಡಿಕೊಂಡಿರಬೇಕೆಂದು ವಾದಿಸುವವರಿದ್ದಾರೆ. ಹಾಗೆ ನೋಡಿದರೆ ಕಲಿತವರು ಮತ್ತು ಬಲ್ಲವರಲ್ಲಿ ಹೆಚ್ಚು ಮಂದಿ ಇದೇ ಹಾದಿಯಲ್ಲಿ ಸಾಗುವುದೇ ಲೇಸು ಎನ್ನುತ್ತಾರೆ. ಆದರೆ ಇದು ಕನ್ನಡ ತನ್ನನ್ನು ತಾನು ಕೊಂದು ಕೊಳ್ಳುವ ಇರುಕಲಿನ ಹಾದಿಯೆಂಬುದನ್ನು ಅವರು ಅರಿತಂತಿಲ್ಲ. ಮಡಿಗನ್ನಡ ಕೆಲವರ ಕನ್ನಡ ಆಗಿ ಉಳಿದರೆ ಅದು ಎಂದಿಗೂ ಎಲ್ಲರ ಕನ್ನಡ ಆಗುವುದಿಲ್ಲ. ಒಳಗೊಳ್ಳುವ ಬಗೆಯನ್ನು ಒಪ್ಪಿಕೊಳ್ಳದೆ, ನುಡಿಯನ್ನು ದಿನದಿನವೂ ಬಳಸುವವರನ್ನು ಹೊರಗಿಟ್ಟರೆ ಆಗ ಕನ್ನಡದ ಏಳಿಗೆ ಎನ್ನುವುದು ಕನ್ನಡಿಯ ಗಂಟಾಗಿ ಬಿಡುತ್ತದೆ.
ಕನ್ನಡದ ಮುನ್ನಡೆಗೆ ಏನು ಅಡ್ಡಿಗಳಿವೆ ಎನ್ನುವುದನ್ನು ಅರಿಯೋಣ. ಮೊದಲಿಗೆ ಆಳುವವರಿಗೆ ಮತ್ತು ಉಳ್ಳವರಿಗೆ ಕನ್ನಡ ಬೇಕಾಗಿಲ್ಲ. ಆದರೆ ಸರಕು ಮಾರಾಟಗಾರರಿಗೆ ಕನ್ನಡ ಬೇಕಿದೆ. ಹಾಗಾಗಿಯೇ ಆಡಳಿತ ನಡೆಸುವವರು ಕನ್ನಡವನ್ನು ಕಡೆಗಣಿಸಿದರೂ ಅಲೆಯುಲಿ ಸೆಟ್ ಗಳನ್ನು ಮಾರುವ ಕಂಪನಿಗಳವರು ಕನ್ನಡವನ್ನು ಬಳಸಲು ನೆರವಾಗುವ ಸೆಲ್ ಫೋನ್ ಗಳನ್ನು ತಯಾರಿಸಿ ಮಾರುಕಟ್ಟೆಗೆ ತಂದಿಡುತ್ತಿದ್ದಾರೆ. ಹಾಲಿವುಡ್‌ನ ಹೆಚ್ಚು ಹಣಹೂಡಿಕೆಯ ಸಿನಿಮಾಗಳು ಕನ್ನಡದ ದನಿಯೊದನೆ ನುಗ್ಗಿ ಬರುವ ದಿನಗಳು ಹತ್ತಿರವಾಗುತ್ತಿವೆ. ಇದೆಲ್ಲವನ್ನು ನೋಡಿದಾಗ ಒಂದೆಡೆ ಕನ್ನಡ ಕೆಲವರಿಗೆ ಬೇಡದ ಹೊರೆ; ಅದು ತೇಲಲೀಯದ ಗುಂಡು. ಮತ್ತೆ ಕೆಲವರಿಗೆ ಹೇಗಾದರೂ ಮಾಡಿ ಜನರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಇರುವ ದಾರಿಯಾಗಿದೆ. ಇವೆರಡೂ ಒಂದೊಂದು ಬಗೆಯಲ್ಲಿ ಕನ್ನಡದ ಏಳಿಗೆಗೆ ತಡೆಗಳನ್ನು ತರುತ್ತಿವೆ.
ಆಡಳಿತ ನಡೆಸುವವರು ತಾವು ಜನರಿಗೆ ಹೊಣೆಗಾರರಲ್ಲ ಎಂದು ತಿಳಿದಿರುವುದರಿಂದ ಜನರ ನುಡಿಯನ್ನು ಕಡೆಗಣಿಸಿ ಇಂಗ್ಲಿಶಿಗೆ ಮೊರೆಹೋಗುತ್ತಿದ್ದಾರೆ. ಇದಕ್ಕೆ ಉಳ್ಳವರ ಒತ್ತಾಸೆಯೂ ಇದೆ. ಅವರ ಆಸೆಗಳನ್ನು ಪೂರೈಸಲು ಇಂಗ್ಲಿಶ್ ಎಲ್ಲರಿಗೂ ಬೇಕೆಂಬ ನಂಬಿಕೆಯನ್ನು ಈ ನೆಲದಲ್ಲಿ ಬೇರೂರಿಸಲಾಗುತ್ತಿದೆ. ಏನೇ ಮಾಡಿದರೂ ಇಂಗ್ಲಿಶ್ ಎಲ್ಲ ಕನ್ನಡಿಗರ ಮೊದಲ ನುಡಿಯಾಗುವ ಕಾಲ ಎಂದೆಂದು ಬರುವುದಿಲ್ಲ. ಅದು ಕೆಲವರ ಕೈಯಲ್ಲಿರುವ ಜಾದೂ ಕಡ್ಡಿ. ಎಲ್ಲರಿಗೂ ದೊರಕುವುದೆಂಬ ಆಸೆಯನ್ನು ಹುಟ್ಟಿಸಿ ಸವಾರಿ ಮಾಡಲು ಉಳ್ಳವರು ಸೊಂಟಕಟ್ಟಿ ನಿಂತಿದ್ದಾರೆ.ಇದರ ಜೊತೆಗೆ ಕಲಿಕೆಯ ಹಂತದಲ್ಲಿ ಮಡಿಗನ್ನಡಕ್ಕೆ ಮೊದಲ ಮಣೆಯನ್ನು ಹಾಕಿ ನುಡಿಯಲು ಅರಿಯಲು ತಿಳಿದಿರುವ ಕನ್ನಡದ ಮಕ್ಕಳು ಕನ್ನಡವನ್ನು ಓದಲು ಮತ್ತು ಬರೆಯಲು ಆಗದಂತೆ ಮಾಡುವ ಹಾದಿಯನ್ನು ಹಿಡಿಯಲಾಗಿದೆ. ಮಡಿಗನ್ನಡವೆಂದಾಗ ಅದು ಮೈಲಿಗೆಯನ್ನು ತಾಳಿಕೊಳ್ಳದ ಕನ್ನಡ ಎನ್ನುವ ತಿರುಳಿರುವಂತೆ ಅದು ಮಡಿಯಲು ಮುನ್ನುಗ್ಗುತ್ತಿರುವ ಕನ್ನಡವೆಂಬ ತಿರುಳೂ ಇದೆ ಎನ್ನುವುದನ್ನು ನೆನಪಿನಲ್ಲಿಡಬೇಕು. ಈ ಎರಡೂ ಬಗೆಗಳು ಕನ್ನಡದ ಏಳಿಗೆಗೆ ತಡೆಗಳನ್ನು ಒಡ್ಡುತ್ತಿವೆ.
ಇನ್ನು ಸರಕುಗಳನ್ನು ತಂದು ನಮ್ಮ ಮುಂದೆ ಹರಡುತ್ತಿರುವರಲ್ಲಿ ಕಾಣುತ್ತಿರುವ ಕನ್ನಡದ ಒಲವು ನಮ್ಮನ್ನು ಒಮ್ಮೆಗೆ ಮರುಳು ಮಾಡುವಂತಿದ್ದರೂ ಈ ಹಾದಿಯೂ ಕನ್ನಡವನ್ನು ಒಂದು ಹತ್ಯಾರವನ್ನಾಗಿ ಕಾಣುವುದೇ ಹೊರತು ಕನ್ನಡಿಗರ ಹಕ್ಕನ್ನಾಗಿ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಈ ಸರಕುದಾರರು ಬಳಸುವ ನುಡಿಯಲ್ಲಿ ಕನ್ನಡದ್ದೇ ಆದ ಬದುಕಿನ ನೋಟಗಳು ಕಣದಂತಾಗಿರುತ್ತವೆ. ಅಲ್ಲಿನ ಕನ್ನಡ ಮಾರುವವರು ಬಳಸುವ ದಂದುಗದ ಕನ್ನಡ. ಅದಕ್ಕೆ ನಾಳೆಗಳೂ ಇಲ್ಲ; ನಿನ್ನೆಗಳಂತು ಇರುವುದೇ ಇಲ್ಲ. ಈವರ ಈ ಬಗೆಯ ನುಡಿಯ ಬಳಕೆಯನ್ನು ತಡೆಯುವುದು ನಮ್ಮ ಅಳವನ್ನು ಮೀರಿದ್ದು. ಆದರೆ ಅದೇ ಕನ್ನಡದ ಏಳಿಗೆ ಎಂದು ಮೈ ಮರೆತು ಕೂರುವಂತಿಲ್ಲ.
ಹಾಗಿದ್ದಲ್ಲಿ ನಮಗಿರುವ ದಾರಿಗಳೇನು? ಮೊದಲನೆಯದಾಗಿ ನಮ್ಮ ಕನ್ನಡವೆಂದರೆ ಅದು ಎಲ್ಲರ ಕನ್ನಡವಾಗಬೇಕು ಎಂಬ ನಂಬಿಕೆಯನ್ನು ಬೆಳೆಸಿಕೊಳ್ಳ ಬೇಕು. ಕೆಲವರು ಮಾತ್ರ ಓದಿ ಅರಿತುಕೊಳ್ಳಬಲ್ಲ, ಕೆಲವರು ತಂತಮ್ಮಲ್ಲೇ ಮಾತಾಡಿಕೊಳ್ಳಬಲ್ಲ ಕನ್ನಡದ ಮಾದರಿಗೆ ಮನ್ನಣೆ ನೀಡುವುದನ್ನು ನಿಲ್ಲಿಸಬೇಕು. ಈಗ ನುಡಿಯುವುದು ಇಲ್ಲವೇ ಬರೆಯುವುದು ಎಂದರೆ ಅದು ಕೆಲವರು ಕೆಲವರೊಡನೆ ನಡೆಸುವ ಮಾತುಕತೆ ಎಂಬಂತಾಗಿದೆ. ಅಂದರೆ ಎಲ್ಲರೂ ಆ ಮಾತುಕತೆಯೊಳಗೆ ತಮ್ಮ ದನಿಯನ್ನು ಸೇರಿಸಲು ಮುಂದಾದರೆ ಅವರನ್ನು ಒಳಗೊಳ್ಳುವ ಬಗೆಯ ಕನ್ನಡವನ್ನು ಮೈಲಿಗೆಯ ಕನ್ನಡವೆಂದು ದೂರವಿರಿಸಲಾಗುತ್ತಿದೆ. ಅಲ್ಲದೆ ಮಾತಾಡಲಿ ಇಲ್ಲವೇ ಬರೆಯಲಿ ಅಲ್ಲೆಲ್ಲ ಕನ್ನಡ ಎನ್ನುವುದು ಜನರ ಗುರುತು ಎನ್ನುವುದನ್ನು ಈಗ ಮರೆತಿರುವಂತಿದೆ. ಅದು ಮಾತಾಡುವವರ ಇಲ್ಲವೇ ಬರೆಯುವವರ ಗುರುತು ಎಂದ ಮಾತ್ರ ತಿಳಿದು ಅದಕ್ಕೆ ತಕ್ಕ ನುಡಿಗಟ್ಟುಗಳನ್ನು ಕಟ್ಟಿಕೊಂಡು ಮುನ್ನಡೆಯಲಾಗುತ್ತಿದೆ. ಇದು ತಪ್ಪಬೇಕು.
ಹೀಗಾಗಲು ಏನು ಮಾಡಬೇಕು? ಮೊದಲನೆಯದಾಗಿ ಎಲ್ಲರ ಕನ್ನಡದಲ್ಲಿ ಕನ್ನಡದ ಬದುಕಿನ ನೋಟಗಳು ಕಾಣುವಂತಾಗಬೇಕು.ನಾವೀಗ ಏನು ಮಾಡುತ್ತಿದ್ದೇವೆ ಗೊತ್ತೇನು? ಲೋಕವನ್ನೆಲ್ಲ ಒಳಗೊಳ್ಳುವ ಇರಾದೆಯಲ್ಲಿ ಇಂಗ್ಲಿಶಿನ ನೋಟಗಳನ್ನು ಸಂಸ್ಕೃತದ ಪದಗಳಲ್ಲಿ ಇರಿಸಿ ಇಗೋ ಇದೇ ನಮ್ಮ ಕನ್ನಡ ಎಂದು ನಂಬಿಸಿದ್ದೇವೆ. ಕನ್ನಡದ ಪದಗಳನ್ನು ಅಯ್ದುಕೊಂಡು ಅ ಪದಗಳಲ್ಲಿ ನಮ್ಮ ನಿಲುವುಗಳನ್ನು ಕಟ್ಟಿಕೊಡಲು ಹೊರಟರೆ ಆಗ ನಾವು ಈವರೆಗೆ ಹಿಡಿದಿರುವ ಹಾದಿ ಮನ್ನುಗ್ಗುವ ಹಾದಿಯು ಹೊಸ ಮಾದರಿಯ ಕಾರುಗಳ ನಡೆಗೆ ಹೇಳಿ ಮಾಡಿಸಿದ ಹೆದ್ದಾರಿಯಂತಿದ್ದರೂ ಅಲ್ಲಿ ಹಸುಗಳನ್ನು ತರುಬಿಕೊಂಡು ನಡೆದು ಬರುವ ಕನ್ನಡಿಗನಿಗೆ ಜಾಗವಿಲ್ಲ ಎನ್ನುವುದು ಗೊತ್ತಾಗ ತೊಡಗುತ್ತದೆ. ಹೀಗೆಲ್ಲ ಮಾಡಿದರೆ ಕನ್ನಡ ನಲುಗಿ,ಬಡವಾಗಿ ಮೂಳೆ ಬಿಟ್ಟುಕೊಳ್ಳುತ್ತದೆ ಎಂದು ಕೆಲವರು ಹಲಬುತ್ತಿದ್ದಾರೆ. ಬೇಡದ ಕೊಬ್ಬನ್ನು ತುಂಬಿಕೊಂಡು ಮೆರೆಯುವುದಕ್ಕಿಂತ (ಹಾಗೆ ಕೊಬ್ಬಿದವರು ಕಣ್ಮನ ಸೆಳೆಯುವಂತಿದ್ದರೂ) ಮೂಳೆ ಬಿಟ್ಟುಕೊಂಡು ಬದುಕು ನಿಬಾಯಿಸುವುದೇ ಲೇಸು ಎನ್ನುವುದನ್ನು ಒಪ್ಪಬೇಕು. ಮತ್ತೆ ಕೆಲವರು ಹೀಗೆ ಮಾಡಿದರೆ ಕನ್ನಡದ ಚೆಲುವೆಲ್ಲ ಸೋರಿ ಹೋಗಿಬಿಡುವುದೆಂದು ಹಪಹಪಿಸುತ್ತಿದ್ದಾರೆ. ಅಂತಹವರು ತಮ್ಮ ಬತ್ತಳಿಕೆಯಲ್ಲಿ ಎಂದೂ ಬಳಸದ ಹತ್ಯಾರುಗಳನ್ನಾಗಿ ಸಂಸ್ಕೃತದ ಪದಗಳೆಂಬ ಬಾಣಬಿರುಸುಗಳನ್ನು ಇಟ್ಟುಕೊಂಡಿರಲಿ. ಕನ್ನಡಿಗರಿಗೆ ಗಿಡ ಮುರಿದು ಹಿಡಿದ ಕೋಲು ಸಾಕು. ಈ ಆಯ್ಕೆಯನ್ನು ಮಾಡಿಕೊಂಡರೆ ಆಗ ಈಗಿರುವ ಅಡೆತಡೆಗಳನ್ನು ಮಟ್ಟಿನಿಂತು ಕನ್ನಡ ಮನ್ನಡೆಯ ಬಲ್ಲುದು ಎನ್ನುವುದು ನನ್ನ ನಂಬಿಕೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ