ಭಾನುವಾರ, ಡಿಸೆಂಬರ್ 12, 2010

ಕರ್ನಾಟಕ ಓದು

ಕನ್ನಡದ ತಿಳಿವು ಕನ್ನಡದ ಮೂಲಕ ದೊರೆಯುವಂತಾಗಬೇಕು.



ನಮಗೆ ಕನ್ನಡದ ಮೂಲಕ ಸಿಗುವ ತಿಳುವಳಿಕೆ ಯಾವುದಾಗಿರಬೇಕು? ಹೀಗೆ ಕೇಳಿದರೆ ಇದೆಂತಹ ಮಾತೆಂದು ಪಕ್ಕಕ್ಕೆ ತಳ್ಳಿ ಹಾಕುವವರೇ ಹೆಚ್ಚು. ಆದರೆ ಕನ್ನಡದ ಮೂಲಕ ನಮಗೆ ದೊರೆಯುವ ತಿಳುವಳಿಕೆ ಈಗ ಇಂಗ್ಲಿಶಿನ ಮೂಲಕ ದೊರೆಯುವ ತಿಳುವಳಿಕೆಯೇ ಆಗಿರಬೇಕೆ? ತಿಳುವಳಿಕೆಯನ್ನು ಪಡೆದುಕೊಳ್ಳುವ ಚೌಕಟ್ಟನ್ನೂ ಕೂಡ ನಾವು ಹೊರಗಿನಿಂದ ಪಡೆದುಕೊಳ್ಳಬೇಕೆ? ಹಾಗೆ ನೋಡಿದರೆ ಸುಮಾರು ಐವತ್ತು ವರುಷಗಳ ಹಿಂದಿನಿಂದಲೇ ಕನ್ನಡದ ಮೂಲಕ ತಿಳಿವನ್ನು ನೀಡುವ ನಡೆಗಳು ಹೆಚ್ಚಿನ ಕಲಿಕೆಯ ಹಂತದಲ್ಲಿ ಮೊದಲಾಗಿವೆ. ಅದಕ್ಕೆ ಬೇಕಾದ ಹೊತ್ತಗೆಗಳನ್ನು ಇಂಗ್ಲಿಶಿನಿಂದ ಕನ್ನಡಕ್ಕೆ ತರುವ ಕೆಲಸವೂ ನಡೆಯಿತು. ಕಲಿಸಲು ಕನ್ನಡವನ್ನೇ ಬಳಸುವ ನಿಟ್ಟಿನಲ್ಲಿ ಕೆಲಸಗಳೂ ನಡೆದವು. ಈಗಲೂ ನಮಗೆಲ್ಲರಿಗೂ ತಿಳಿದಿರುವಂತೆ ಹೆಚ್ಚಿನ ಕಲಿಕೆಯ ನೆಲೆಯಲ್ಲಿ ಮಾನವಿಕ ತಿಳಿವುಗಳನ್ನು ಇಂಗ್ಲಿಶಿನ ಮೂಲಕ ಕಲಿಸುವ ಮಾತಿದೆಯಾದರೂ ಕಲಿಯುವವರು, ತಾವು ಕಲಿಯಲು ಮತ್ತು ಕಲಿತದ್ದನ್ನು ಬರೆಯಲು ಕನ್ನಡವನ್ನೇ ಬಳಸುತ್ತಿದ್ದಾರೆ. ಅರಿಮೆಯ ಬರಹಗಳನ್ನು ಕನ್ನಡದಲ್ಲೇ ಬರೆಯುತ್ತಿದ್ದಾರೆ. ಹಾಗಿದ್ದರೂ ನಮಗೆ ಬೇಕಾದ ಗುರಿಯನ್ನು ನಾವು ಮುಟ್ಟಿಲ್ಲವೆಂಬ ಕೊರತೆ ನಮ್ಮೆಲ್ಲರನ್ನೂ ಕಾಡುತ್ತಿದೆ. ಏಕೆ ಹೀಗಾಯ್ತು?

ತಿಳಿವು ಯಾವ ನುಡಿಯ ಮೂಲಕ ನಮಗೆ ದೊರಕಬೇಕು ಎಂಬುದನ್ನು ಹೇಳುವಾಗಲೇ ()ನಮಗೆ ಯಾವ ತಿಳಿವು ಬೇಕು ಮತ್ತು () ತಿಳಿವು ಯಾವ ಚೌಕಟ್ಟಿನ ಮೂಲಕ ನಮಗೆ ದೊರಕಬೇಕು ಎನ್ನುವುದನ್ನು ಗುರುತಿಸಕೊಳ್ಳಬೇಕಾಗುತ್ತದೆ. ಎಲ್ಲ ತಿಳುವಳಿಕೆಗಳು ನಮಗೆ ಕನ್ನಡದ ಮೂಲಕ ದೊರಕಲಿ ಎಂದು ಹೇಳಿದಾಗ ನಾವು ನಮಗೇ ಗೊತ್ತಿಲ್ಲದಂತೆ ಕನ್ನಡವನ್ನು ಪಡೆಯುವ ನುಡಿಯ ಜಾಗದಲ್ಲಿ ಅಲುಗಾಡದಂತೆ ಇರಿಸಿಬಿಟ್ಟಿರುತ್ತೇವೆ. ಆಗ ನಮಗೆ ದೊರೆಯುವ ತಿಳಿವು ನಮ್ಮದಾಗಿರದು. ಆದರೆ ಅದೇ ತಿಳಿವು ನಮಗೆ ಬೇಕಾಗಿದೆ ಎಂದು ಒಪ್ಪಿಕೊಳ್ಳುವ ಮತ್ತು ಇದಲ್ಲದೆ ಬೇರೆ ಯಾವ ಹಾದಿಗಳೂ ನಮಗೆ ತೆರೆದಿಲ್ಲ ಎಂದು ನಂಬುವ ಒತ್ತಡಕ್ಕೆ ನಮ್ಮ ಕಲಿಕೆಯ ಚೌಕಟ್ಟು ಈವರೆಗೆ ನಮ್ಮನ್ನು ಗುರಿಮಾಡಿದೆ. ಇದರಿಂದ ನಮ್ಮ ನುಡಿಯೂ ಬೆಳೆಯಲಿಲ್ಲ;ನಮ್ಮ ತಿಳಿವು ಹೆಚ್ಚಾದರೂ ಅದು ಎಂದೂ ನಮ್ಮದಾಗಲಿಲ್ಲ. ಬೇರೆ ಬೇರೆ ಮಾನವಿಕ ತಿಳಿವುಗಳಲ್ಲಿ ಹೆಚ್ಚಿನ ಓದಿದವರೂ ಕೂಡ ತಾವು ಓದಿದ್ದಕ್ಕೂ ತಾವು ಸುತ್ತಲೂ ನೋಡುತ್ತಿರುವುದಕ್ಕೆ ಯಾವ ನಂಟೂ ಇಲ್ಲದಿರುವುದನ್ನು ಕಂಡಿದ್ದಾರೆ. ಓದಿದ್ದನ್ನು ಹಾಗೆಯೇ ಮರೆತು ಬಿಟ್ಟಿದ್ದಾರೆ.ಹಾಗಿದ್ದರೆ ನಾವು ಈಗ ಏನು ಮಾಡಬೇಕು?

ಇದಕ್ಕಾಗಿ ಕರ್ನಾಟಕದ ಓದು ಎಂಬ ಹೊಸ ತಿಳಿವಿನ ವಲಯವನ್ನು ನಾವು ಕಟ್ಟ ಬೇಕಿದೆ. ಈಗ ಬೇರೆಬೇರೆಯಾಗಿ ಒಂದಕ್ಕೊಂದು ನಂಟಿಲ್ಲದಂತೆ ಇರುವ ಹಲವು ತಿಳಿವಿನ ವಲಯಗಳನ್ನು ಒಗ್ಗೂಡಿಸಬೇಕು. ಅವುಗಳ ನಡುವೆ ಇರುವ ಗಡಿಗೆರೆಗಳನ್ನು ಅಳಿಸಲಾಗದಿದ್ದರೂ ಗೆರೆಗಳು ಗೋಡೆಗಳಾಗದಂತೆ ನೋಡಿಕೊಳ್ಳಬೇಕಾಗಿದೆ. ಚರಿತ್ರೆ,ಸಮಾಜ ಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಾಹಿತ್ಯದ ಓದು, ಭಾಷಾಶಾಸ್ತ್ರ, ಕಲಾಧ್ಯಯನ, ಪುರಾತತ್ವಶಾಸ್ತ್ರ ಇವೇ ಮೊದಲಾದ ತಿಳಿವಿನ ವಲಯಗಳಲ್ಲಿ ಕರ್ನಾಟಕವನ್ನು ನೋಡಿರುವ ಬಗೆಯನ್ನು ಹೊಸ ಓದಿನ ವಲಯ ಗುರುತಿಸಿಕೊಳ್ಳುತ್ತದೆ. ಇದು ಕೇವಲ ಮಾಹಿತಿಗಳನ್ನು ಕೂಡಿಹಾಕುವ ಕೆಲಸವಲ್ಲ. ಹಿಂದೆ ಪಟ್ಟಿ ಮಾಡಿದ ತಿಳಿವಿನ ವಲಯಗಳು ಜಾಗತಿಕ ತಿಳಿವಿನ ಚೌಕಟ್ಟಿನ ನೆಲೆಯಲ್ಲಿ ಕನ್ನಡದ,ಕರ್ನಾಟಕದ ಮಾಹಿತಿಯನ್ನು ನೋಡುವ ಹಾದಿಯನ್ನು ಹಿಡಿದಿವೆ. ಇದರಿಂದ ನಮಗೆ ಹೆಚ್ಚಿನ ನೆರವು ದೊರೆಯುವುದಿಲ್ಲ. ಕರ್ನಾಟಕವನ್ನು ಒಳಗಿನವರು ನೋಡಿರುವ ಬಗೆ ಮತ್ತು ಕರ್ನಾಟಕದ ಹೊರಗಿನವರು ನೋಡಿರುವ ಬಗೆ ಈಗ ಒಂದೇ ಆಗಿವೆ. ಏಕೆಂದರೆ ಒಳಗಿದ್ದೂ ಕರ್ನಾಟಕವನ್ನು ನೋಡಿರುವವರೂ ಬಳಸಿರುವ ಚೌಕಟ್ಟುಗಳು ಹೊರಗಿನವೇ ಆಗಿವೆ. ಹೆಚ್ಚೆಂದರೆ ಒಳಗಿದ್ದು ನೋಡಿದವರು ಕನ್ನಡದಲ್ಲಿ ಬರೆದಿದ್ದಾರು. ಅಂದರೆ ಕರ್ನಾಟಕದ ಓದು ಎಂಬುದು ಈಗ ಇದ್ದರೂ ಅದು ನಮ್ಮನ್ನು ತಕ್ಕ ದಾರಿಯಲ್ಲಿ ಕರೆದೊಯ್ಯುವಂತೆ ಇಲ್ಲ.

ನಾವು ಕಟ್ಟ ಬೇಕಾದ ಕರ್ನಾಟಕದ ಓದು ಎಂಬ ತಿಳಿವಿನ ವಲಯವು ಹಲವು ತಿಳಿವಿನ ವಲಯಗಳನ್ನು ಹೆಣೆಯ ಬೇಕಲ್ಲದೆ ತಿಳಿಯುವ ಚೌಕಟ್ಟನ್ನು ಕೂಡ ಹೊಸದಾಗಿ ಕಟ್ಟ ಬೇಕು. ಆಗ ಮಾತ್ರ ಕನ್ನಡದ ತಿಳಿವು ಕನ್ನಡದ ಮೂಲಕ ದೊರೆಯುವುದಕ್ಕೆ ದಾರಿಗಳು ಕಾಣತೊಡಗುತ್ತವೆ. ತಿಳಿಯುವ ಚೌಕಟ್ಟಿನಲ್ಲಿಒಳಗಿನವು ಹೊರಗಿನವು ಎಂದು ಬೇರೆಬೇರೆ ಮಾಡುವುದು ಸರಿಯಲ್ಲ ಎಂದು ಕೆಲವರು ಹೇಳಬಹುದು. ಹೀಗೆ ಹೇಳುವವರು ಈಗ ನಮಗೆ ದೊರೆತಿರುವ ಮತ್ತು ನಾವು ಬಳಸುತ್ತಿರುವ ತಿಳಿಯುವ ಚೌಕಟ್ಟುಗಳು ಸರಿಯಾಗಿವೆಯೆಂದೂ ಅವುಗಳನ್ನು ಬೇಡವೆಂದು ಹೇಳಬಾರದೆಂದೂ ನಂಬಿದ್ದಾರೆ. ಜೊತೆಗೆ ಚೌಕಟ್ಟುಗಳು ಎಲ್ಲ ಕಾಲಕ್ಕೂ ಸಲ್ಲುತ್ತವೆಂದು ಒಪ್ಪಿದ್ದಾರೆ. ತಿಳಿಯುವ ಬಗೆಯನ್ನು ಕಟ್ಟಿ ಹಾಕುವ ಒತ್ತಡಗಳು ಆಯಾ ಕಾಲದಲ್ಲಿ ಆಯಾ ಸಂಸ್ಕೃತಿಗಳಲ್ಲಿ ಹೇಗೆ ಕೆಲಸ ಮಾಡುತ್ತವೆ ಎನ್ನುವುದನ್ನು ಅವರು ಮರೆತಿರುತ್ತಾರೆ. ಇಲ್ಲವೇ ಅಂತಹ ಒತ್ತಡಗಳು ನಮ್ಮನ್ನು ಕಾಡಿಸ ಬಾರದೆಂದು ಹೇಳುತ್ತಾರೆ. ಹೀಗೆ ಒಪ್ಪಿದ್ದರಿಂದಲೇ ನಾಡು ನುಡಿಗಳು ಯಾವಾಗಲೂ ಯಾರೋ ಹೇಳಿದ್ದನ್ನು ಮರು ನುಡಿಯುವ ನೆಲೆಗೆ ಬಂದು ನಿಂತಿವೆ. ಇದು ಬದಲಾಗ ಬೇಕಾದರೆ ತಿಳಿವಿನ ಮಾಹಿತಿಗಳ ಒಡಲಲ್ಲೇ ಹುಟ್ಟುವ ತಿಳಿವಿನ ಚೌಕಟ್ಟುಗಳನ್ನೂ ಕಂಡುಕೊಳ್ಳಬೇಕು.

ಇದು ಸರಾಗವಾದ ಹಾದಿಯಲ್ಲ. ಎಲ್ಲಕಿಂತ ದೊಡ್ಡ ತೊಡರೆಂದರೆ ಮೇಲೆ ಪಟ್ಟಿ ಮಾಡಿದ ಮಾನವಿಕ ತಿಳಿವಿನ ವಲಯಗಳು ಕರ್ನಾಟಕವನ್ನು ಕಾಣುವ ಬಗೆಯಲ್ಲೇ ಈಗಿರುವಂತೆ ಏರುಪೇರುಗಳಿವೆ. ಕೆಲವು ಕಡೆ ನಿನ್ನೆಗಳ ಕಡೆಗೆ ಒತ್ತು ಹೆಚ್ಚಿದ್ದರೆ ಮತ್ತೆ ಕೆಲವು ಕಡೆ ಇಂದಿಗೆ ಒತ್ತಿದೆ. ಕೆಲವು ನಾಳೆಗಳತ್ತ ಮೊಗ ತಿರುಗಿಸಿವೆ. ಕೆಲವು ವಲಯಗಳು ಕರ್ನಾಟಕವನ್ನು ಬಿರುಕುಗಳಿಲ್ಲದ ಒಂದೇ ಹಾಸು ಎಂದು ತಿಳಿದರೆ ಮತ್ತೆ ಕೆಲವು ವಲಯಗಳು ಇಲ್ಲಿ ಒಂದಕ್ಕೊಂದು ಹೊಂದಿಕೆಯಾಗದ ಹಲವು ನೆಲೆಗಳು ತಿಕ್ಕಾಟದಲ್ಲಿವೆಯೆಂದು ತಿಳಿಯುತ್ತವೆ. ಹಲವು ನೆಲೆಗಳ ನಂಟನ್ನು ನೋಡುವ ಬಗೆಯೂ ಕೂಡ ಬೇರೆ ಬೇರೆಯಾಗಿದೆ. ಎಲ್ಲ ಗೋಜಲುಗಳನ್ನು ಬಿಡಿಸಿಕೊಂಡು ನಾವೀಗ ಕರ್ನಾಟಕದ ಓದು ಎಂಬ ತಿಳಿವಿನ ವಲಯವನ್ನು ಕಟ್ಟುಬೇಕು. ಹೆಚ್ಚಿನ ಓದಿನಲ್ಲಿ ತಿಳಿವಿನ ವಲಯ ನೆಲೆಗೊಳ್ಳ್ಳುವಂತೆ ಮಾಡಬೇಕು. ಆಗ ಮಾತ್ರ ಕನ್ನಡದ ಮೂಲಕ ತಿಳಿವನ್ನು ಪಡೆಯುವ ಆಯ್ಕೆಯಿಂದಾಗಿ ಪಡೆಯುವ ನುಡಿಯಾಗಿ ಉಳಿದು ಬಿಟ್ಟಿರುವ ಕನ್ನಡ, ಬರಲಿರುವ ದಿನಗಳಲ್ಲಿ ಕೊಡುವ ನುಡಿಯಾಗಿಯೂ ಬದಲಾಗಬಲ್ಲುದು.

ಹೀಗೆ ಮಾಡುತ್ತ ಕುಳಿತರೆ ನಾವು ಬಾವಿಯ ಕಪ್ಪೆಗಳಾಗುತ್ತೇವೆ ಎಂದು ಹೇಳುವವರೂ ಇದ್ದಾರೆ. ದಿಟ. ಆದರೆ ಕಡಲನ್ನು ನೋಡುವ ಇರಾದೆ ತೋರುತ್ತ ನಮ್ಮ ಸುತ್ತಲಿನ ಕೆರೆಕುಂಟೆಗಳು ಬತ್ತಿಹೋಗುತ್ತಿರುವುದನ್ನು ಮರೆಯಬಾರದಲ್ಲವೇ? ಹಿಂದಿನ ಓಣಿಯ ಜಗಳವೇ ಇನ್ನೂ ಕೊನೆಗೊಂಡಿಲ್ಲವಾದ್ದರಿಂದ ನಾನು ಯಾವುದೋ ದೂರದ ಹೊರನಾಡಿನಲ್ಲಿ ನನ್ನ ಕವಿತೆಗಳನ್ನು ಓದಲು ಹೋಗುವ ಬಯಕೆ ಇಲ್ಲ ಎಂದು ಕವಿ ಬೇಂದ್ರೆಯವರು ಹೇಳಿದ್ದು ಕೇವಲ ನಗೆಚಾಟಿಕೆಯ ಮಾತಷ್ಟೇ ಅಲ್ಲವಷ್ಟೆ.






6 ಕಾಮೆಂಟ್‌ಗಳು:

  1. "ಕರ್ನಾಟಕ ಓದು" ಇನ್ನೂ ಹೆಚ್ಚು ಹೆಚ್ಚು ಹಬ್ಬಲಿ ಆ ಕುರಿತು ಚಿಂತನೆಗಳು ಬೆಳೆಯಲಿ
    - ಮೇಟಿ ಮಲ್ಲಿಕಾರ್ಜುನ

    ಪ್ರತ್ಯುತ್ತರಅಳಿಸಿ
  2. ಸಾರ‍್ ‘ಕರ್ನಾಟಕದ ಓದು ಎಂಬ ಹೊಸ ತಿಳಿವಿನ ವಲಯವನ್ನು ನಾವು ಕಟ್ಟ ಬೇಕಿದೆ. ಈಗ ಬೇರೆಬೇರೆಯಾಗಿ ಒಂದಕ್ಕೊಂದು ನಂಟಿಲ್ಲದಂತೆ ಇರುವ ಹಲವು ತಿಳಿವಿನ ವಲಯಗಳನ್ನು ಒಗ್ಗೂಡಿಸಬೇಕು’ ಎಂದಿರುವ ನಿಮ್ಮ ಮಾತು ಈ ಹೊತ್ತು ಕನ್ನಡದ ಈ ಕಾಲಕ್ಕೆ ಹೆಚ್ಚು ಒಪ್ಪುವಂತಿದೆ. ಈ ತಿಳುವಳಿಕೆ ಎಲ್ಲರೊಳಗೂ ಧ್ಯಾನದ ರೂಪ ಪಡೆಯಬೇಕಿದೆ.

    ಪ್ರತ್ಯುತ್ತರಅಳಿಸಿ
  3. ತಾವು ಮಂಡಿಸಿರುವ 'ಕರ್ನಾಟಕ ಓದು' ಎಂಬ ಕಲ್ಪನೆ ವಾಸ್ತವವಾಗಬೇಕಾದ ಜರೂರು ಇದೆ.

    ಪ್ರತ್ಯುತ್ತರಅಳಿಸಿ
  4. ನೀವು ರವಿವಾರ ೧೨ ಡಿಸೆಂಬರ್ ೨೦೧೦ ರಲ್ಲಿ ಬರೆದ ಈ ಲೇಖನದ ಬಗ್ಗೆ ಸುಗತ ಶ್ರೀನಿವಾಸರಾಜು ಅವರ ಔಟ್ಲುಕ್ ಬ್ಲಾಗಿನಲ್ಲಿ ನಿನ್ನೆ ಓದಿದೆ. ಅಲ್ಲಿಂದ ನಿಮ್ಮ ಬ್ಲಾಗಿಗೆ ಬಂದು ನಿಮ್ಮ ಮಹತ್ವಪೂರ್ಣ ಲೇಖನವನ್ನು ಓದಿದೆ.

    "ಕರ್ನಾಟಕದ ಓದು ಎಂಬ ಹೊಸ ತಿಳಿವಿನ ವಲಯವನ್ನು ನಾವು ಕಟ್ಟ ಬೇಕಿದೆ." ಈ ನಿಮ್ಮ ಚಿಂತನೆಯ ಬಗ್ಗೆ ಆಳವಾಗಿ ಯೋಚಿಸುವುದು ಬಹಳ ಅಗತ್ಯ. ನಮ್ಮ ನುಡಿ, ಸಂಸ್ಕೃತಿ ಎದುರಿಸುತ್ತಿರುವ ಗಂಭೀರ ಪರಿಸ್ಥಿತಿಯ ಅರಿವು ತಳಮಳ, ತಲ್ಲಣಗಳ ಜತೆ ನಮ್ಮೆಲ್ಲರ ಮನಸ್ಸಿನಲ್ಲಿ ಮೂಡಬೇಕಾಗಿದೆ.

    ಒಂದು ಕೋರಿಕೆ: "ಕನ್ನಡದ ಮೂಲಕ ನಮಗೆ ದೊರೆಯುವ ತಿಳುವಳಿಕೆ ಈಗ ಇಂಗ್ಲಿಶಿನ ಮೂಲಕ ದೊರೆಯುವ ತಿಳುವಳಿಕೆಯೇ ಆಗಿರಬೇಕೆ? ಆ ತಿಳುವಳಿಕೆಯನ್ನು ಪಡೆದುಕೊಳ್ಳುವ ಚೌಕಟ್ಟನ್ನೂ ಕೂಡ ನಾವು ಹೊರಗಿನಿಂದ ಪಡೆದುಕೊಳ್ಳಬೇಕೆ? " ಈ ಬಗ್ಗೆ ಒಂದೆರಡು ಉದಾಹರಣೆಗಳನ್ನು ಕೊಟ್ಟು ವಿವರಿಸಲು ಸಾಧ್ಯವೇ?

    ಜಯದೇವ

    ಪ್ರತ್ಯುತ್ತರಅಳಿಸಿ
  5. We should also provide access to all the knowledge and information available on the Internet by using tools like Google Translate (Kannada). This can have profound effect, since Kannada readers will not be limited to the contents created in Kannada. Google has already implemented automatic translation for Hindi. They are also working on translation for other Indian languages. If more Indians write to Google and help in their efforts, they might complete Google Kannada Translate sooner.

    ಪ್ರತ್ಯುತ್ತರಅಳಿಸಿ
  6. ವಾಸುಕಿ ಅವರೇ,
    ಯಾವ knowledge? ನನಗನಿಸುವಂತೆ, ನಾರಾಯಣ ಅವರು ಭಾಷಾಂತರದ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ. ಅವರು ಮೇಲೆ ಹೇಳಿರುವಂತೆ, "ಇದು ಕೇವಲ ಮಾಹಿತಿಗಳನ್ನು ಕೂಡಿಹಾಕುವ ಕೆಲಸವಲ್ಲ. ಹಿಂದೆ ಪಟ್ಟಿ ಮಾಡಿದ ತಿಳಿವಿನ ವಲಯಗಳು ಜಾಗತಿಕ ತಿಳಿವಿನ ಚೌಕಟ್ಟಿನ ನೆಲೆಯಲ್ಲಿ ಕನ್ನಡದ, ಕರ್ನಾಟಕದ ಮಾಹಿತಿಯನ್ನು ನೋಡುವ ಹಾದಿಯನ್ನು ಹಿಡಿದಿವೆ. ಇದರಿಂದ ನಮಗೆ ಹೆಚ್ಚಿನ ನೆರವು ದೊರೆಯುವುದಿಲ್ಲ. ಕರ್ನಾಟಕವನ್ನು ಒಳಗಿನವರು ನೋಡಿರುವ ಬಗೆ ಮತ್ತು ಕರ್ನಾಟಕದ ಹೊರಗಿನವರು ನೋಡಿರುವ ಬಗೆ ಈಗ ಒಂದೇ ಆಗಿವೆ." ನಿಖರವಾದ ಕೆಲವು ವಿಜ್ನಾನ ವಿಷಯಗಳಲ್ಲಿ ಒಳ್ಳೆಯ ಭಾಷಾಂತರ ಬೇಕಾಗಬಹುದು. ಮಿಕ್ಕ ಕಡೆ, ಕರ್ನಾಟಕದ, ಕನ್ನಡದ ದೃಷ್ಟಿಕೋನದ ಮೂಲಕ ತಿಳಿವು ಹುಟ್ಟಬೇಕು.

    ಜಯದೇವ್

    ಪ್ರತ್ಯುತ್ತರಅಳಿಸಿ